ಕೊಚ್ಚಿ: ಸಕಲ ಸೌಲಭ್ಯಗಳಿದ್ದರೂ ಪಾಸಾಗುವದು ಕಷ್ಟ ಎಂದು ಅನೇಕರು ಹೇಳುವುದನ್ನು ಕೇಳುತ್ತೇವೆ, ಆದರೆ ಕೇರಳ ರೈಲು ನಿಲ್ದಾಣದಲ್ಲಿ ಕೂಲಿಯೊಬ್ಬ ರೈಲು ನಿಲ್ದಾಣದಲ್ಲಿ ಲಭ್ಯವಿರುವ ಉಚಿತ ಮೊಬೈಲ್ ವೈಫೈ ಸೌಲಭ್ಯ ಬಳಸಿಕೊಂಡು ಅಧ್ಯಯನ ನಡೆಸಿ, ಪ್ರತಿಷ್ಠಿತ ಕೇರಳ ಸಾರ್ವಜನಿಕ ಸೇವಾ ಪರೀಕ್ಷೆ (ಕೆಎಎಸ್)ಯಲ್ಲಿ ಉತ್ತೀರ್ಣರಾದ ಸ್ಫೂರ್ತಿದಾಯಕ ನಿಜ ಜೀವನದ ಕಥೆ ಇದು.
ಮುನ್ನಾರ್ ಮೂಲದ ಶ್ರೀನಾಥ ಕೆ. ಎಂಬವರು ಕೊಚ್ಚಿ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ.ಕುಟುಂಬಕ್ಕೆ ಒಳ್ಳೆಯ ಭವಿಷ್ಯ ಕಲ್ಪಿಸಬೇಕು ಹಾಗೂ ತನ್ನ ಜೀವನ ಉತ್ತಮಪಡಿಸಿಕೊಳ್ಳಬೇಕು ಎಂಬ ಅಭಿಲಾಷೆಯಲ್ಲಿ ಸರ್ಕಾರಿ ಹುದ್ದೆ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಆದರೆ ಕೂಲಿ ಕೆಲಸದಲ್ಲಿ ಮುಳುಗಿದ ಅವರಿಗೆ ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. 2016ರಲ್ಲಿ ಕೊಚ್ಚಿ ರೈಲು ನಿಲ್ದಾಣದಲ್ಲಿ ರೈಲ್‌ಟೆಲ್ ಉಚಿತ ವೈಫೈ ಸೌಲಭ್ಯ ಪರಿಚಯಿಸಿತು.
ಶ್ರೀನಾಥ ಅವರು ತಾವು ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್, ಸಿಮ್ ಮತ್ತು ಮೆಮೊರಿ ಕಾರ್ಡ್ ಖರೀದಿಸಿದರು. ವೈಫೈ ಬಳಸಿಕೊಂಡು ಸರ್ಕಾರಿ ಪರೀಕ್ಷೆಗಳಿಗೆ ಸಂಬಂಧಿಸಿದ ಆಡಿಯೋ ಬುಕ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರು. ಕೆಲಸ ಮಾಡುವ ಸಮಯದಲ್ಲೇ ಇಯರ್ ಫೋನ್ ಹಾಕಿಕೊಂಡು ಆಡಿಯೋ ಪ್ರಶ್ನೆ-ಉತ್ತರಗಳು ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ಆಲಿಸಿ, ನೆನಪಿನಲ್ಲಿ ಇಟ್ಟುಕೊಳ್ಳಲು ಆರಂಭಿಸಿದರು.
ಪರಿಶ್ರಮದ ನಂತರ ವಿಲೇಜ್ ಅಸಿಸ್ಟೆಂಟ್ ಹುದ್ದೆಗಾಗಿ ಕೇರಳ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆಗೆ ಹಾಜರಾಗಿ, ಶೇ.82ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.