ಹೊಸದಿಲ್ಲಿ: ನಾನು ಈ ಮೊದಲೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ ಎಂದು ಹೇಳಿದ ‘ದಿ ಕಾಶ್ಮೀರ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿಯ ವೀಡಿಯೋ ವ್ಯಾಪಕ ವೈರಲ್ ಆಗಿದೆ.
ಗೋಮಾಂಸ ಸೇವನೆಗೆ ಸಂಬಂಧಿಸಿದಂತೆ ಅಗ್ನಿಹೋತ್ರಿ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ‘ಎಲ್ಲಿ ಉತ್ತಮ ಗೋಮಾಂಸ ಸಿಗುವುದೆಂದು ಹಿಂದೆ ಬರೆದಿದ್ದೆ. ನಾನು ಅದನ್ನು ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ. ನನ್ನ ಬದುಕಲ್ಲಿ ಏನೂ ಬದಲಾಗಿಲ್ಲ’ ಎಂದು ವಿವೇಕ ಅಗ್ನಿಹೋತ್ರಿ ವಿಡಿಯೊದಲ್ಲಿ ಹೇಳಿದ್ದಾರೆ. ಇದು ಹಳೆಯ ವಿಡಿಯೊ ಎನ್ನಲಾಗಿದೆ.
ರಣಬೀರ ಕಪೂರ್ ಈ ಹಿಂದೆ ಹೇಳಿದ್ದ ವಿಡಿಯೋದಲ್ಲಿ ಗೋಮಾಂಸ ತಿನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಅದನ್ನೇ ಇಟ್ಟುಕೊಂಡು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು.
ಗೋಮಾಂಸ ತಿನ್ನುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ವಿವೇಕ ಅಗ್ನಿಹೋತ್ರಿ ಅವರ ಸಿನಿಮಾಗಳನ್ನು ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವುದೇ ದೇವಸ್ಥಾನದ ಒಳಗೆ ಬಿಡಕೂಡದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ನಟ ರಣಬೀರ ಸಿಂಗ್ ಪರ ನಿಂತಿದ್ದ ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.
ಕೇವಲ ರಣಬೀರ್ ಸಿಂಗ್ ಅವರಿಗಷ್ಟೇ ಈ ಬಿಸಿ ತಾಗಬಾರದು, ವಿವೇಕ ಅಗ್ನಿಹೋತ್ರಿ ಮೇಲೂ ಕ್ರಮ ಆಗಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿವೇಕ ಅಗ್ನಿಹೋತ್ರಿ ಅವರ ವಿಡಿಯೋ ವೈರಲ್ ಆಗುತ್ತಿದ್ದರೂ ಆ ಕುರಿತು ವಿವೇಕ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.