ಬೆಂಗಳೂರು, 22: ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಪ್ರಮಾಣವಚನ ಮಾಡಿ ಅಧಿಕಾರ ಸ್ವೀಕರಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ವಿಜೃಂಭಣೆಯಿಂದ ನಡೆಸಿ ಕೊಟ್ಟಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವವರ ಈ ರೀತಿಯ ವರ್ತನೆ ಕುರಿತು ದಕ್ಷಿಣ ಭಾರತದ ಖ್ಯಾತ ನಟ ಕಿಶೋರ ಕುಮಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಫೇಸಬುಕ್ ಪೇಜನಲ್ಲಿ ತಮ್ಮ ಅನಿಸಿಕೆ ಪೋಸ್ಟ್ ಮಾಡಿದ್ದು ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ ಆಗಿದೆ ಎಂದು ಹೇಳಿದ್ದಾರೆ.
ಮಂದಿರ, ರಾಜರು ಮತ್ತು ರಾಜಕೀಯ ನಿಯಂತ್ರಣ ಆದಿ ನಾವು ನೋಡದ್ದೇವಲ್ಲ. ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ. ದೇವರ ಹೆಸರಲ್ಲಿ ಪೂಜಾರಿಯೊಂದಿಗೆ ಸೇರಿ ಜನರನ್ನು ನಿಯಂತ್ರಿಸಿ, ದೇಗುಲ ಕಟ್ಟಿಸಿ, ತಮ್ಮ ಹೆಸರು ಕೆತ್ತಿಸಿ, ದೇಗುಲದ ಶಿಲ್ಪಿಯ ಕೈ ಕತ್ತರಿಸಿ, ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿ, ಅಜರಾಮರರಾದ ದೊರೆಗಳು, ಉಧೋ ಉಧೋ ಎಂದ ಪ್ರಜೆಗಳು, ಭಟ್ಟಂಗಿಗಳು ಎಂದು ಕಿಶೋರ ವಾಗ್ದಾಳಿ ನಡೆಸಿದ್ದಾರೆ.
ಧರ್ಮ ಮತ್ತು ದೇವರು ರಾಜಕಾರಣಿಗಳ ಕೈಗೆ ಹೋಗಿ ತಾವೂ ಪ್ರಶ್ನಾತೀತವಾಗಿ ಅವರನ್ನೂ ಪ್ರಶ್ನಾತೀತರನ್ನಾಗಿಸಿ ಬಿಡುವುದು ಸಂಸ್ಕೃತಿಯ ಚಲನಶೀಲತೆಗೆ, ನಾಡಿನ ಭವಿಷ್ಯಕ್ಕೆ ಅತೀ ಅಪಾಯಕಾರಿ ಎಂದು ಕಿಶೋರ ಕುಮಾರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಮಮಂದಿರದ ಕುರಿತು ಈ ಹಿಂದೆ ಮಾಡಿದ ಪೋಸ್ಟನಲ್ಲಿ, ‘ಅಸಲಿ ಹಿಂದೂ ವಿರೋಧಿ ಯಾರು? ಧರ್ಮದ ರಾಜಕೀಕರಣವನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುವ ವಿಶ್ವಗುರು ಭಕ್ತರು ಮತ್ತು ತನ್ನ ವೃತ್ತಿಧರ್ಮಕ್ಕೆ ದ್ರೋಹ ಬಗೆದ ಗೋದಿ ಮಾಧ್ಯಮದವರು ಈಗೇನು ಮಾಡುತ್ತಾರೆ? ಶಂಕರಾಚಾರ್ಯರುಗಳನ್ನೂ ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುತ್ತಾರೆಯೇ? ರಾಮ ಮಂದಿರದ ರಾಜಕೀಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ ನಿಜವಾದ ಹಿಂದೂ ವಿರೋಧಿಗಳು ಯಾರು? ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು ಮತ್ತು ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿ ಬಿಡುವುದಿಲ್ಲವೇ? ಈ ಅಯೋಗ್ಯ ರಾಜಕಾರಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು ಅಷ್ಟೇ. ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ, ಮಸೀದಿ ಚರ್ಚುಗಳಲ್ಲಲ್ಲ. ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ.. ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ? ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ’ ಎಂದು ಅವರು ಟೀಕಿಸಿದ್ದರು.