ಬೆಳಗಾವಿ : ಖಾತಾ ವರ್ಗಾವಣೆಗೆ 5 ಲಕ್ಷ ರೂ. ಹಣ ಬೇಡಿಕೆಯಿಟ್ಟಿದ್ದ ತಹಶೀಲದಾರ ಸೋಮಲಿಂಗಪ್ಪ ಹಾಲಗಿ ಹಾಗೂ ಕಚೇರಿಯ ಭೂಸುಧಾರಣಾ ವಿಷಯಗಳ ನಿರ್ವಾಹಕ ಪ್ರಸನ್ನ ಜಿ. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ತಡರಾತ್ರಿ ನಡೆದಿದೆ.
ಜಿಲ್ಲೆಯ ಕಿತ್ತೂರು ತಹಶೀಲ್ದಾರರಾದ ಸೋಮಲಿಂಗಪ್ಪ ಹಾಲಗಿ ಹಾಗೂ ಗುಮಾಸ್ತ ಪ್ರಸನ್ನ ಜಿ ಅವರುಗಳು ದೂರುದಾರ ರಾಜೇಂದ್ರ ಇನಾಮದಾರ ಅವರ ತಂದೆಯ ಹೆಸರಿನಲ್ಲಿದ್ದ 10 ಎಕರೆ ಭೂಮಿಯನ್ನು ರಾಜೇಂದ್ರ ಅವರ ಹೆಸರಿಗೆ ವರ್ಗಾಯಿಸಲು 5 ಲಕ್ಷ ರೂ ಹಣದ ಬೇಡಿಕೆಯಿಟ್ಟದ್ದರು. ಮೊದಲ ಹಂತದಲ್ಲಿ ಎರಡು ಲಕ್ಷ ರೂ. ನೀಡುವುದು ಮತ್ತು ಉಳಿದ ಹಣದ ಶ್ಯೂರಿಟಿಯಾಗಿ 20 ಲಕ್ಷ ರೂಪಾಯಿ ಖಾಲಿ ಚೆಕ್ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು.
ತಹಶೀಲದಾರರ ಮನೆಯಲ್ಲಿ ಮೊದಲ ಹಂತದಲ್ಲಿ ಎರಡು ಲಕ್ಷ ರೂಪಾಯಿ ಹಣ ಮತ್ತು 20 ಲಕ್ಷ ಚೆಕ್ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣ ಮತ್ತು ಚೆಕ್ ಸಮೇತ ಅಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಸೂಚನೆಯಂತೆ ಬೆಂಗಳೂರಿನ ಅಪರ್ ಲೋಕಾಯುಕ್ತ ಪೊಲೀಸ ಮಹಾನಿರ್ದೇಶಕರಾದ ಐಪಿಎಸ್ ಪ್ರಶಾಂತಕುಮಾರ ಠಾಕೂರ, ಬೆಳಗಾವಿಯ ಲೋಕಾಯುಕ್ತ ಪೊಲೀಸ ಅಧೀಕ್ಷಕರಾದ ಐಪಿಎಸ್ ಶ್ರೀಮತಿ ಯಶೋದಾ ವಂಟಗೋಡಿ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಅನ್ನಪೂರ್ಣ ಹುಲಗೂರ ಮತ್ತು ಇತರ ಲೋಕಾಯುಕ್ತ ಪೋಲೀಸರು ಕಾರ್ಯಾಚರಣೆ ನಡೆಸಿದರು.