ಬೆಳಗಾವಿ, ಅ.೧೩ : ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ವ್ಯಾಪಕ ಪ್ರಚಾರವನ್ನು ಕೈಗೊಳ್ಳುವುದರ ಜತೆಗೆ ಕಳೆದ ಬಾರಿಯಂತೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ನೇರಪ್ರಸಾರ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಿತ್ತೂರು ಉತ್ಸವ ಪ್ರಚಾರ ಉಪ ಸಮಿತಿ ಅಧ್ಯಕ್ಷರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹೇಳಿದರು.
ಕಿತ್ತೂರ ಉತ್ಸವ-೨೦೨೩ ರ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪ್ರಚಾರ ಉಪ ಸಮಿತಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಉತ್ಸವಕ್ಕೆ ಸಂಬಂಧಿಸಿದಂತೆ ಪ್ರತಿವರ್ಷದಂತೆ ಉತ್ಸವ ಸಮಿತಿಯು ಒದಗಿಸುವ ಬ್ಯಾನರ್, ಹೋರ್ಡಿಂಗ್ ಅಳವಡಿಕೆ; ಕರಪತ್ರಗಳು, ಗೋಡೆ ಪೋಸ್ಟರ್ ಮತ್ತಿತರ ಪ್ರಚಾರಸಾಮಗ್ರಿಗಳನ್ನು ಬಳಸಿಕೊಂಡು ಹೆಚ್ಚಿನಮಟ್ಟದಲ್ಲಿ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಚಾರ ಸಮಿತಿ ಸದಸ್ಯ ನಾಗರಾಜ ಜೋರಾಪುರ ಮಾತನಾಡಿ, ಉತ್ಸವದ ಪ್ರಮುಖ ಆಕರ್ಷಣೆ ಹಾಗೂ ಕಾರ್ಯಕ್ರಮಗಳ ಕುರಿತು ಕಿರು ವಿಡಿಯೋ ತುಣುಕಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಸೋಮಶೇಖರ ಕುಪ್ಪಸಗೌಡರ, ದಸರಾ ಮಾದರಿಯಲ್ಲಿ ಚಂದನವಾಹಿನಿಯಲ್ಲಿ ಕಿತ್ತೂರು ಉತ್ಸವದ ಪ್ರಮುಖ ಕಾರ್ಯಕ್ರಮಗಳ ನೇರಪ್ರಸಾರ ವ್ಯವಸ್ಥೆ ಮಾಡಬೇಕು ಎಂದರು.
ಪ್ರದೀಪ್ ಮೇಲಿನಮನಿ ಅವರು, ಆಯಾ ದಿನಗಳ ಕಾರ್ಯಕ್ರಮಗಳು ಮತ್ತು ವಿಶೇಷ ಆಕರ್ಷಣೆಗಳ ಕುರಿತ ಮಾಹಿತಿಯನ್ನು ಬ್ಯಾನರ್ ಮತ್ತು ಹೋರ್ಡಿಂಗ್ ಗಳಲ್ಲಿ ಪ್ರಚುರಪಡಿಸಬೇಕು ಎಂದು ಸಲಹೆ ನೀಡಿದರು.
ಶಿವಾನಂದ ಭೂತಿಮಠ, ಬಸ್ ಗಳ ಮೇಲೆ ಪೋಸ್ಟರ್ ಅಂಟಿಸಬೇಕು; ಬಸ್ ನಿಲ್ದಾಣಗಳಲ್ಲೂ ಆಡಿಯೋ-ವಿಡಿಯೋ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಶಾನೂಲ್ ಮತ್ತೇಖಾನ ಮಾತನಾಡಿ, ಬಸ್ ನಿಲ್ದಾಣಗಳಲ್ಲರುವ ಎಲ್.ಇ.ಡಿ. ಪರದೆಗಳಲ್ಲಿ ಕಿತ್ತೂರು ಉತ್ಸವ ಕುರಿತು ವಿಡಿಯೋ ಪ್ರಸಾರ ಮಾಡಿದರೆ ಲಕ್ಷಾಂತರ ಪ್ರಯಾಣಿಕರಿಗೆ ಮಾಹಿತಿಯನ್ನು ತಲುಪಿಸಬಹುದು ಎಂದು ಹೇಳಿದರು.
ಇದಲ್ಲದೇ ಬೃಹತ್ ಗಾತ್ರದ ಏರ್ ಬಲೂನ್ ಮೇಲೆ ರಾಣಿ ಚೆನ್ನಮ್ಮ ಉತ್ಸವದ ಬಗ್ಗೆ ಮುದ್ರಿಸಿ ಚೆನ್ನಮ್ಮ ವೃತ್ತದಲ್ಲಿ ಹಾರಿಸಬೇಕು; ಮೂರು ದಿನಗಳ ಕಾರ್ಯಕ್ರಮಗಳ ಪ್ರಸಾರಕ್ಕೆ ಚ.ಕಿತ್ತೂರು ಹಾಗೂ ಬೆಳಗಾವಿ ನಗರದ ಪ್ರಮುಖ ಸ್ಥಳಗಳಲ್ಲಿ ಎಲ್.ಇ.ಡಿ. ಪರದೆ ವ್ಯವಸ್ಥೆ ಮಾಡಬೇಕು; ಸುಸಜ್ಜಿತ ಮಾಧ್ಯಮ ಕೇಂದ್ರ ಸ್ಥಾಪಿಸಬೇಕು; ಕಾಕತಿ ಗ್ರಾಮದಲ್ಲೂ ಸಾಂಸ್ಕöÈತಿಕ ಕಾರ್ಯಕ್ರಮ ಆಯೋಜಿಸಬೇಕು; ಆಕರ್ಷಕ ಜಾಹೀರಾತು ನೀಡಬೇಕು ಎಂಬುದು ಸೇರಿದಂತೆ ವ್ಯಾಪಕ ಪ್ರಚಾರಕ್ಕಾಗಿ ಅನೇಕ ಸಲಹೆಗಳನ್ನು ನೀಡಿದರು.
ವಿನಾಯಕ ಗುನಗಿ, ರುದ್ರಪ್ಪ ಅಕ್ಕಿ, ಕಲ್ಲಪ್ಪ ಅಗಸಿಮನಿ, ಸಂಜೀವ, ಬಸವರಾಜ್, ಮಹಾಂತೇಶ ಕರಿಬಸನ್ನವರ, ರತ್ನಾ ಪೂಜೇರ, ಸಂತೋಷ ಕೊಟಬಾಗಿ, ಬಸವರಾಜ ವೀರಾಪುರ, ಚಿನಗುಡಿ, ವಿನಾಯಕ ಮರಡಿ, ಉಮೆಶ್ ಗೌರಿ ಸೇರಿದಂತೆ ಅನೇಕ ಜನರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆಗಳನ್ನು ನೀಡಿದರು. ವಾರ್ತಾ ಇಲಾಖೆಯ ಸಿಬ್ಬಂದಿ ಅನಂತ ಪಪ್ಪು, ಎಂ.ಎಲ್.ಜಮಾದಾರ ಉಪಸ್ಥಿತರಿದ್ದರು.