ಕೇವಲ 1 ರೂಪಾಯಿಗೆ ಕಾಂಗ್ರೆಸ್ ಜಮೀನು ನೀಡಿದ್ದರಿಂದ ಕೆಎಲ್‌ ಇ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಬೆಳೆದು ನಿಂತಿದೆ

A B Dharwadkar
ಕೇವಲ 1 ರೂಪಾಯಿಗೆ ಕಾಂಗ್ರೆಸ್ ಜಮೀನು ನೀಡಿದ್ದರಿಂದ ಕೆಎಲ್‌ ಇ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಬೆಳೆದು ನಿಂತಿದೆ

ಬೆಳಗಾವಿ, ಮೇ ೨:  ಕಾಂಗ್ರೆಸ್ ಸರ್ಕಾರ ಅಂದು ಕೇವಲ ಒಂದು ರೂಪಾಯಿಗೆ ಜಮೀನು ನೀಡಿದ ಫಲವಾಗಿ ಇಂದು ಕೆಎಲ್ಇ ಸಂಸ್ಥೆಯ  ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯಗಳು ಇಷ್ಟು ದೊಡ್ಡದಾಗಿ ಬೆಳೆದಿವೆ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಕಾರಣ. ಆದರೆ ಬೆಳಗಾವಿ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಏನಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಪ್ರಶ್ನಿಸಿದರು.

ಕೆಎಲ್ಇ ವಿಶ್ವವಿದ್ಯಾಲಯದ ಜವಾಹರಲಾಲ ನೆಹರು ಮೆಡಿಕಲ್ ಕಾಲೇಜಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಮತಯಾಚಿಸಿ ಮಾತನಾಡಿದ ಸಚಿವರು, ಬೆಳಗಾವಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು? ಜಗದೀಶ ಶೆಟ್ಟರ್ ಕೊಡುಗೆ ಏನು? ಎಂದು ಜನ ತೀರ್ಮಾನಿಸುವರು ಎಂದರು.

ಸಾಮಾಜಿಕ ಜವಾಬ್ದಾರಿ ಅರಿತು ಪ್ರತಿಯೊಬ್ಬರೂ ಮತದಾನ ಮಾಡಬೇಕು. ಹುಬ್ಬಳ್ಳಿ ಜನರಿಂದ‌ ತಿರಸ್ಕಾರಕ್ಕೆ ಒಳಗಾಗಿರುವ ವ್ಯಕ್ತಿಯನ್ನು ಬೆಳಗಾವಿಯಲ್ಲಿ ಗೆಲ್ಲಿಸುವುದು ಸರಿಯಲ್ಲ. ಮೃಣಾಲ್‌ ಇನ್ನೂ ಯುವಕ ಬೆಳಗಾವಿ ಅಭಿವೃದ್ಧಿಗೆ ತನ್ನದೇ ಕನಸು ಕಟ್ಟಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಎರಡು ಬಾರಿ‌ ಸಚಿವರಾಗಿ, ಮುಖ್ಯಮಂತ್ರಿಯಾಗಿ, ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಜಗದೀಶ ಶೆಟ್ಟರ್ ಅವರಿಗೆ ಸ್ವಂತ ಶಕ್ತಿ ಎಂಬುದೇ‌ ಇಲ್ಲ. ಪ್ರಚಾರಕ್ಕೆ ಹೋದಲೆಲ್ಲಾ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡುವ ಸಲುವಾಗಿ ಮತ ನೀಡಬೇಕು ಅಂತ ಹೇಳ್ತಿದ್ದಾರೆ. ಸ್ವಂತ ಶಕ್ತಿಯೇ ಇಲ್ಲದ ಶೆಟ್ಟರ್ ಅವರಿಂದ ಬೆಳಗಾವಿ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರಶ್ನಿಸಿದರು.

ರಾಜಕಾರಣವನ್ನು ಎಂದಿಗೂ ಟೈಮ್ ಪಾಸ್ ಆಗಿ ನೋಡಿಲ್ಲ. ಜನಸೇವೆಯೇ ನನಗೆ ವೃತ್ತಿ ಇದ್ದಂತೆ‌. ರಾಜಕಾರಣದಲ್ಲಿ ನನ್ನಷ್ಟು ಅವಮಾನ ಎದುರಿಸಿದವರು ಇಲ್ಲ. ಎಲ್ಲವನ್ನೂ ಮೆಟ್ಟಿ ನಿಂತು ಬಂದಿದ್ದೇನೆ. ನಾನು ಯಾವತ್ತೂ ಜಾತಿ‌ ರಾಜಕೀಯ ಮಾಡಿಲ್ಲ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಹೇಳಿದರು.

ಈ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ್, ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ ಗೌಡ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮಾತನಾಡಿದರು. ಈ ವೇಳೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಕುಮಾರ ಶೆಟ್ಟಿ, ಕೆಎಲ್ ಇ ವಿಶ್ವವಿದ್ಯಾಲಯದ ಆಜೀವ ಸದಸ್ಯರಾದ ಡಾ.ವಿ.ಎಸ್. ಸಾಧುನವರ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.