ಬೆಳಗಾವಿ : ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಭತ್ತು ಈಗಾಗಲೇ ಜನರನ್ನು ವಶಕ್ಕೆ ಪಡೆಯಲಾಗಿದೆ.
ತಲೆಮರೆಸಿಕೊಂಡಿರುವ ಉಳಿದ ಮೂವರಿಗಾಗಿ ಶೋಧ ನಡೆದಿದೆ ಎಂದು ಬೆಳಗಾವಿಯ ಪೊಲೀಸ್ ವರಿಷ್ಠ ಸಂಜೀವ ಪಾಟೀಲ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಟಿಸಿಎಲ್ ಕಿರಿಯ ಗುಮಾಸ್ತ ಸಹಾಯಕ ಪರೀಕ್ಷೆಗೆ ಗೋಕಾಕ ಪಟ್ಟಣದ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದ ಕುರಿತು ಶಿಕ್ಷಣ ಇಲಾಖೆ ಮಾಹಿತಿ ನೀಡಿತ್ತು.
ಈ ಕುರಿತು ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಭ್ಯರ್ಥಿಯೊಬ್ಬ ತಾನು ಧರಿಸಿದ್ದ ಸ್ಮಾರ್ಟ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಹೊರಗಡೆಯಿರುವ ತಮ್ಮವರಿಗೆ ಕಳುಹಿಸಿಕೊಟ್ಟಿದ್ದ, ಆ ಅಭ್ಯರ್ಥಿಯನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆಯಲ್ಲಿ ಆತ ತನಿಖಾ ಅಧಿಕಾರಿಗಳನ್ನು ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿಕೆ ಗ್ರಾಮಕ್ಕೆ ಕರೆದುಕೊಂಡು ಹೋದ. ಆ ಸ್ಥಳದಿಂದ ಕೆಲವರು ಪ್ರಶ್ನೆಗಳಿಗೆ ಉತ್ತರ ಹೇಳಿಕೊಟ್ಟಿದ್ದಾರೆ.
ಆ ಸ್ಥಳದಲ್ಲಿ ಸಿಪಿಯು, ಪ್ರಿಂಟರ್ ಹಾಗೂ ಪ್ರಶ್ನೆ ಪತ್ರಿಕೆಯ ಪ್ರಿಂಟ್ ಕಾಪಿ ದೊರೆಯಿತು. ತನಿಖೆಯ ಮುಂದಿನ ಭಾಗವಾಗಿ ಅಕ್ರಮಕ್ಕೆ ಮೊಬೈಲ್ ಬ್ಲೂಟೂತ್ ಬಳಸಿದ್ದು ಗೊತ್ತಾಯಿತು.
ಈ ಲಿಂಕ್ ಗದಗ ಜಿಲ್ಲೆಗೆ ನಂಟಿರುವ ಕುರಿತಂತೆ ತನಿಖೆ ನಡೆಸಿದ ಪೊಲೀಸರಿಗೆ 4.5 ಲಕ್ಷ ರೂಪಾಯಿಗೆ ಈ ಪ್ರಶ್ನೆ ಪತ್ರಿಕೆ ಮಾರಾಟ ಆದ ವಿಚಾರ ಗೊತ್ತಾಗುತ್ತೆ. ಈಗಾಗಲೇ ಪ್ರಶ್ನೆ ಪ್ರತ್ರಿಕೆ ಪಡೆಯಲು ಆರೋಪಿಗಳು 4 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯ ಆರೋಪಿ ತಾನು ಅಕ್ರಮದಿಂದ ಸಂಪಾದಿಸಿದ ಹಣ ಕೊಟ್ಟು ತಾನು ಬಂಗಾರದ ಆಭರಣಗಳನ್ನು ಬ್ಯಾಂಕಿನಲ್ಲಿಟ್ಟು ಪಡೆದಿದ್ದ ಸಾಲವನ್ನು ತೀರಿಸಿ ಆಭರಣಗಳನ್ನು ಬಿಡಿಸಿಕೊಂಡಿದ್ದಾನೆ ಮತ್ತು ಇದೇ ಆಭರಣಗಳನ್ನು ಮತ್ತೆ ಬ್ಯಾಂಕಿನಲ್ಲಿಟ್ಟು ಹೊಸ ಸಾಲ ಪಡೆದಿದ್ದಾನೆ.
ಆರೋಪಿ ಈ ಹಿಂದೆ ಪೊಲೀಸ್ ಕಾನ್ಸಟೇಬಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆಸಿ ಪೊಲೀಸರಿಂದ ಬಂಧಿಸಲ್ಪಟ್ಟು, ಜಾಮೀನಿನ ಮೇಲೆ ಬಿಡುಗಡೆಯಾಗಿ ನಂತರ ಮತ್ತೆ ಈ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದಾನೆ.
ವಶಕ್ಕೆ ಪಡೆದಿರುವ ಇನ್ನೊಬ್ಬ ಗೋಕಾಕನಲ್ಲಿ ಸ್ಪರ್ಧಾತ್ಮ ಪರೀಕ್ಷೆಗಳ ತರಬೇತಿ ಸೆಂಟರ್ ನಡೆಸುತ್ತಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳ ಪತ್ತೆಗೆ ಪೊಲೀಸರು ಈಗಾಗಲೇ ಜಾಲ ಬೀಸಿದ್ದಾರೆ ಎಂದು ಎಸ್ ಪಿ ಪಾಟೀಲ ತಿಳಿಸಿದರು.