ಬೆಂಗಳೂರು : ಹುಬ್ಬಳ್ಳಿಯ ಸಂಸದ ಪ್ರಹ್ಲಾದ ಜೋಶಿ ತೀರಾ ಅಪಾಯಕಾರಿ, ಅವರು ದಕ್ಷಿಣ ಕರ್ನಾಟಕದ ಬ್ರಾಹ್ಮಣರಂತಲ್ಲ, ಬ್ರಾಹ್ಮಣರ ಸಂಸ್ಕಾರದಲ್ಲಿಯೂ ಎರಡು-ಮೂರು ವಿಧಗಳಿವೆ. ಇವರು ಶೃಂಗೇರಿ ಮಠವನ್ನು ಒಡೆದು, ಅಲ್ಲಿನ ವಿಗ್ರಹ ಕೆಡವಿದ ದೇಶಸ್ಥ ಬ್ರಾಹ್ಮಣರ ಗುಂಪಿಗೆ ಸೇರಿದವರು. ಮಹಾತ್ಮ ಗಾಂಧಿಯನ್ನು ಕೊಂದ ಬ್ರಾಹ್ಮಣರ ವರ್ಗಕ್ಕೆ ಸೇರಿದವರು, ಅವರ ಕುರಿತು ಜನ ಎಚ್ಚರಿಕೆಯಾಗಿರಿ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಡಿಎಸ್ ನ ಪಂಚರತ್ನ ಯಾತ್ರೆ ಕುರಿತು ಜೋಶಿ ನೀಡಿದ್ದ “ಇದು ಪಂಚರತ್ನ ಯಾತ್ರೆಯಲ್ಲ, ಅದಕ್ಕೆ ನವಗ್ರಹ ಹಿಡಿದಿದೆ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಭಾಗದ ಬ್ರಾಹ್ಮಣ ಸಮಾಜವು ʼಸರ್ವಜನೋ ಸುಖಿನೋ ಭವಂತುʼ ಎನ್ನುವವರು. ಇವರು ನಮ್ಮ ಭಾಗದ ಬ್ರಾಹ್ಮಣರಲ್ಲ. ಮಹಾರಾಷ್ಟ್ರದ ಮರಾಠ ಪೇಶ್ವೆ ಬ್ರಾಹ್ಮಣ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕತಿ ಬೇಕಿಲ್ಲ, ದೇಶ ಒಡೆಯುವ ಕುತಂತ್ರ ರಾಜಕಾರಣ ಮಾಡುತ್ತಾರೆ. ದೇಶಭಕ್ತಿಯ ಹೆಸರಿನಲ್ಲಿ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಕೊಂದ ಪ್ರವರ್ಗದಿಂದ ಬಂದಂಥವರು” ಎಂದು ಟೀಕಿಸಿದ್ದಾರೆ.
ವೀರಶೈವ, ಒಕ್ಕಲಿಗ, ಹಿಂದುಳಿದ ಮತ್ತು ದಲಿತರು ಈ ಬಿಜೆಪಿಯ ಮತ್ತು ಆರ್ಎಸ್ಎಸ್ನ ಹುನ್ನಾರ, ಕುತಂತ್ರಕ್ಕೆ ಬಲಿಯಾಗಬಾರದು. ಇವರು ಈ ರಾಜ್ಯ ಒಡೆಯುತ್ತಾರೆ. ಪ್ರಹ್ಲಾದ ಜೋಶಿಯನ್ನು ಮುಖ್ಯಮಂತ್ರಿ ಮಾಡಿ 8 ಜನರನ್ನು ಉಪ ಮುಖ್ಯಮಂತ್ರಿಗಳಾಗಿ ಮಾಡಲು ದೆಹಲಿಯ ಆರ್ಎಸ್ಎಸ್ ಕಚೇರಿಯಲ್ಲಿ ಸಭೆ ನಡೆಸಿರುವುದರ ಕುರಿತು ನನಗೆ ಮಾಹಿತಿ ಬಂದಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ನಮ್ಮ ಹಳೇ ಕರ್ನಾಟಕದ ಬ್ರಾಹ್ಮಣರಲ್ಲಿ ಸಂಸ್ಕೃತಿಯಿದೆ. ನಾವು ಅವರ ಕಾಲಿಗೆ ಬೀಳುತ್ತೇವೆ, ಅವರನ್ನು ಪೂಜಿಸುತ್ತೇವೆ ಮತ್ತು ಗುರುಗಳ ರೀತಿ ಕಾಣುತ್ತೇವೆ. ಆದರೆ ಮೇಲಿನ ವರ್ಗದ ಬ್ರಾಹ್ಮಣರು ಸಮಾಜ ಒಡೆಯುವವರು. ಶೃಂಗೇರಿ ಮಠವನ್ನು ಒಡೆದು, ಶಂಕರಾಚಾರ್ಯರ ವಂಶಸ್ಥರನ್ನು ಓಡಿಸಿದಂತವರು. ಆ ವರ್ಗದ ಬ್ರಾಹ್ಮಣರು ಕುರಿತು ಕರ್ನಾಟಕದ ಕನ್ನಡಿಗರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.