ಬೆಳಗಾವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಸರಕಾರಕ್ಕೆ ವಿನಂತಿ ಮಾಡಿ ದಯವಿಟ್ಟು ನಿಮ್ಮ ಮಂತ್ರಿಗಳನ್ನು ಬೆಳಗಾವಿಗೆ ಕಳುಹಿಸಬೇಡಿ, ಇಲ್ಲಿ ಪರಿಸ್ಥಿತಿ ಸರಿಯಾಗಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದ ಸರಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದರೂ “ಏನೇ ಆಗಲಿ ನಾವು ಬೆಳಗಾವಿಗೆ ಹೋಗೇ ಹೋಗುತ್ತೇವೆ, ಯಾವ ಶಕ್ತಿಯೂ ನಮ್ಮನ್ನು ತಡೆಯದು” ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಲ್ಲಿ ಒಬ್ಬರಾದ ಚಂದ್ರಕಾಂತ ಪಾಟೀಲ ತಿಳಿಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುವ ಸಂಭವ ಇದೆ.
ಕನ್ನಡ ಸಂಘಟನೆಗಳು ಮಹಾರಾಷ್ಟ್ರ ಮಂತ್ರಿಗಳ ಹೇಳಿಕೆಯನ್ನು ಸವಾಲಾಗಿ ತೆಗೆದುಕೊಂಡಿವೆ. “ಅವರು ಹೇಗೆ ಬೆಳಗಾವಿ ಪ್ರವೇಶಿಸಿಸುತ್ತಾರೋ ನೋಡುತ್ತೇವೆ. ಹೇಗೋ ಪ್ರವೇಶಿಸಿದರೂ ಅವರ ಗಡಿ ಸಭೆಯಲ್ಲಿ ನುಗ್ಗುತ್ತೇವೆ, ನಾಡದ್ರೋಹಿಗಳಿಗೂ ಹಾಗು ಅವರಿಗೆ ಬೆಂಬಲ ನೀಡುವವರಿಗೂ ತಕ್ಕ ಪಾಠ, ಬುದ್ಧಿ ಕಲಿಸುತ್ತೇವೆ” ಎಂದು ಹೇಳಿಕೆ ನೀಡಿದ್ದು, ರಾಜ್ಯದ ಇತರ ಭಾಗಗಳಿಂದಲೂ ಕನ್ನಡ ಸಂಘಟನೆಗಳ ನೂರಾರು ಕನ್ನಡ ಯುವಕರು ಬೆಳಗಾವಿಗೆ ಬರುವ ಕುರಿತು ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಕೂಡ “ಅವರು ಬಂದೇ ಬರುತ್ತೇವೆ ಎಂದರೆ ಹಿಂದಿನ ಸರಕಾರಗಳು ಇಂತಹ ಸಮಸ್ಯೆಯನ್ನು ಹೇಗೆ ಎದುರಿಸಿದ್ದವೋ ಹಾಗೇ ಈಗಲೂ ಎದುರಿಸುತ್ತೇವೆ” ಎಂದು ಹೇಳಿಕೆ ನೀಡಿದ್ದು ಸರಕಾರ ಅವರ ಪ್ರವೇಶ ಅಧಿಕೃತವಾಗಿ ನಿಷೇಧಿಸುವ ಸಾಧ್ಯತೆಯಿದೆ.
ಮಹಾರಾಷ್ಟ್ರದ ಸಚಿವರು ಬಂದರೆ ಬೆಳಗಾವಿ ಜಿಲ್ಲೆ ಮಾತ್ರವಲ್ಲ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುವ ಸಾಧ್ಯತೆಯಿದ್ದು, ಕಾನೂನು ಸುವ್ಯಸ್ಥೆಗೆ ಸಮಸ್ಯೆಯಾಗಲಿದೆ. ಹಾಗಾಗಿ ಅವರ ಪ್ರವೇಶ ನಿಷೇದಿಸುವದೇ ಸೂಕ್ತವೆಂದು ಬೆಳಗಾವಿ ಗುಪ್ತಚರ ವಿಭಾಗವು ರಾಜ್ಯ ಸರಕಾರಕ್ಕೆ ವರದಿ ನೀಡಿದೆ.
ನಾವು ಮಹಾರಾಷ್ಟ್ರ ಪರವಾಗಿರುವವರ ಸಭೆ ಮಾಡುವದಿಲ್ಲ, ಅಂಬೇಡ್ಕರ ಮಹಾಪರಿನಿರ್ವಾಣ ಸೇರಿದಂತೆ ಇತರ ಸಭೆಗಳಲ್ಲಿ ಭಾಗವಹಿಸುತ್ತೆವೆಂದರೂ ಕನ್ನಡಿಗರ ಪ್ರತಿಭಟನೆ ತಪ್ಪಿದ್ದಲ್ಲ ಎಂದೂ ವರದಿಯಲ್ಲಿ ಸೂಚಿಸಲಾಗಿದೆ ಎಂದೂ ಗುಪ್ತಚರ ಮೂಲಗಳು “ಸಮದರ್ಶಿ”ಗೆ ತಿಳಿಸಿವೆ.
ಈ ಸಮಯದಲ್ಲಿ ಉಭಯ ರಾಜ್ಯಗಳ ನಡುವೆ 3-4 ದಿನ ಬಸ್ ಸಂಚಾರ ಸ್ಥಗಿತಗೊಂಡು ಎರಡೂ ಕಡೆಯ ಜನರು ತೊಂದರೆ ಅನುಭವಿಸುವದು ಶತಸಿದ್ದ.
ಬೆಳಗಾವಿಯ ತಮ್ಮ ಭೆಟ್ಟಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಮಹಾರಾಷ್ಟ್ರ ಸಚಿವರ ಹೇಳಿಕೆಯ ಹಿನ್ನೆಲೆಯಲ್ಲಿ ಅವರು ಡಿ. 6ಕ್ಕೆ ಮೊದಲೇ ಅಂದರೆ ದಿ. 4 ಅಥವಾ 5 ರಂದು ಅವರು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ ಎಂದೂ ತನ್ನ ವರದಿಯಲ್ಲಿ ಗುಪ್ತಚರ ಇಲಾಖೆ ತಿಳಿಸಿದೆ.
1986ರ ಜೂನ್ 1ರಂದು ನಲ್ಲಿ ಜರುಗಿದ ಮರಾಠಿಗರ ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ಮುಖಂಡ ಶರದ ಪವಾರ ಅವರು ಪ್ರವೇಶ ನಿಷೇಧದ ನಡುವೆಯೂ ಪ್ರತಿಭಟನಾ ಸ್ಥಳವಾದ ಬೆಳಗಾವಿ ಚನ್ನಮ್ಮ ವೃತ್ತ ಪ್ರವೇಶಿಸಲು ಯತ್ನಿಸಿದ ಪ್ರಕರಣ ನಡೆದಿತ್ತು.
ಆಗಿನ ರಾಜ್ಯ ಸರಕಾರ ಶರದ ಪವಾರ ಅವರ ಪ್ರವೇಶ ನಿರ್ಬಂಧಿಸಿ ಗಡಿ ಭಾಗಗಳಲ್ಲಿ ಕಟ್ಟೆಚ್ಚೆರ ವಹಿಸಿತ್ತು, ಆದರೆ ಪವಾರ ಎರಡು ದಿನಗಳ ಮೊದಲೇ ಅವರು ರಸ್ತೆ ಮೂಲಕ ಬೆಳಗಾವಿ ಪ್ರವೇಶಿಸಿ ಚನ್ನಮ್ಮ ವೃತ್ತದ ಬಳಿಯಿರುವ ಕ್ಲಬ್ ರಸ್ತೆಯ ಒಂದು ಬಂಗಲೆಯಲ್ಲಿ ಇಳಿದುಕೊಂಡಿದ್ದರು. ಈ ತಂತ್ರ ಈಗಲೂ ಮರುಕಳಿಸುವ ಸಾಧ್ಯತೆಯಿದೆ ಎಂದೂ ಗುಪ್ತಚರ ಇಲಾಖೆ ವರದಿಯಲ್ಲಿ ತಿಳಿಸಿದೆ.