ಬೆಳಗಾವಿ : ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿರುವ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.
ನಂಬಲರ್ಹ ಮೂಲಗಳ ಪ್ರಕಾರ, ಯಾವಾಗ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಮಹೇಶ ಕುಮಟೊಳ್ಳಿಯವರಿಗೆ ಅಥಣಿಯ ಟಿಕೆಟ್ ನೀಡದಿದ್ದರೆ ತಾವೂ ಗೋಕಾಕದಿಂದ ಸ್ಪರ್ಧೆಸುವದಿಲ್ಲವೆಂದು ತಿಳಿಸಿದ್ದರೋ ಆಗಲೇ ತಮಗೆ ಟಿಕೆಟ್ ದೊರೆಯದು ಎಂದು ಖಚಿತವಾಗಿತ್ತು. ಆದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಟಿಕೆಟ್ ದೊರಕಿಸಿಕೊಡಿಸುವುದಾಗಿ ನೀಡಿದ್ದ ಭರವಸೆ ನಂಬಿ ಟಿಕೆಟ್ ಪ್ರಕಟಗೊಳ್ಳುವವರೆಗೆ ಕಾಯ್ದುಕೊಂಡಿದ್ದರು ಎನ್ನಲಾಗಿದೆ.
ಬಿಜೆಪಿ ಮಂಗಳವಾರ ಪ್ರಕಟಿಸಿದ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟಿದ್ದರಿಂದ ದುಃಖದಿಂದ ಭಾವುಕರಾದ ಸವದಿ ಸಭೆಯೊಂದರಲ್ಲಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಹರಿಹಾಯ್ದರು. ತಮಗೆ ಅಧಿಕಾರ ಹಸ್ತಾಂತರಮಾಡದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು “ವಂಚಕ, ನಂಬಿಕೆ ದ್ರೋಹಿ ಎಂದು ಯಡಿಯೂರಪ್ಪ ಮತ್ತು ಬಿಜೆಪಿಯವರು ಕರೆದಿದ್ದರು. ಈಗ ಯಡಿಯೂರಪ್ಪ ನನಗೂ ಅದನ್ನೇ ಮಾಡಿದ್ದಾರೆ. ನಂಬಿಸಿ ವಂಚಿಸಿದ್ದಾರೆ” ಎಂದು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿಯವರು ನಿನ್ನೆ ಮಂಗಳವಾರ ಫೋನ್ ಮಾಡಿ “ಸವದಿ ನಿನಗೆ ಈ ಸಲ ಟಿಕೆಟ್ ಕೊಡಲಾಗುವದಿಲ್ಲ” ಎಂದು ತಿಳಿಸಿದ್ದರು. ಸವದಿ ಅವರು ಮುಖ್ಯಮಂತ್ರಿಗಳನ್ನು ” ಭಲೇ ಬಸಣ್ಣ” ಎಂದು ಬನ್ನಿಸಿದರು.
ಕಾಂಗ್ರೆಸ್ ಸೇರ್ಪಡೆ
ನಾಲ್ಕು ಭಾರಿ ಅಥಣಿ ಶಾಸಕರಾಗಿದ್ದ ಲಕ್ಷ್ಮಣ ಸವದಿ ಈ ಅವಧಿಯಲ್ಲಿ ರಾಜಕೀಯದ ಒಳ ಅರಿವು ಹೊಂದಿದವರು. ರಮೇಶ ಜಾರಕಿಹೊಳಿ ಪ್ರವೇಶದಿಂದ ತಮಗೆ ಅಥಣಿ ಟಿಕೆಟ್ ದೊರೆಯುವ ಕುರಿತು ಸಂಶಯವಿದ್ದ ಅವರು ಮೂರು ತಿಂಗಳಿಂದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ ಜೊತೆ ಸಂಪರ್ಕದಲ್ಲಿದ್ದರು. ಶಿವಕುಮಾರ ಮತ್ತು ಸಿದ್ದರಾಮಯ್ಯ ಕೂಡ ತಮಗೆ ಟಿಕೆಟ್ ದೊರೆಯವ ಸಾಧ್ಯತೆಯಿಲ್ಲ. ಹಾಗಾದರೆ ತಾವು ಕಾಂಗ್ರೆಸ್ ಗೆ ಬರಬಹುದು ಎಂದು ಹೇಳಿದ್ದರೆಂದು ಮೂಲಗಳು ಸಮದರ್ಶಿಗೆ ತಿಳಿಸಿವೆ.
ಎರಡು-ಮೂರು ದಿನಗಳಲ್ಲಿ ಸವದಿ ಬೆಂಗಳೂರು ಇಲ್ಲವೇ ಬೆಳಗಾವಿಯಲ್ಲಿ ಶಿವಕುಮಾರ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿ, ಪ್ರಾಥಮಿಕ ಸದಸ್ಯತ್ವ ಪಡೆದು ಅಥಣಿಯಿಂದ ಸ್ಪರ್ಧಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಸೋಲಿಸಿದ್ದವರನ್ನೇ ಗೆಲ್ಲಿಸಿದ್ದರು
——————————
2018ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಟೊಳ್ಳಿಯವರಿಂದ ಸೋಲಿಸಲ್ಪಟ್ಟಿದ್ದ ಸವದಿ ಅದಕ್ಕೂ ಮೊದಲು ಜರುಗಿದ ಎರಡು ಚುನಾವಣೆಗಳಲ್ಲಿ ಕುಮಟೊಳ್ಳಿಯವರನ್ನು ಸೋಲಿಸಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕುಮಟೊಳ್ಳಿ 2019ರ ಉಪಚುನಾವಣೆಯಲ್ಲಿ ಅಥಣಿಯಿಂದ ಸ್ಪರ್ಧಿಸಿದ್ದರು. ವಿಪರ್ಯಾಸವೆಂದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸವದಿ ಯಶಸ್ವಿಯಾಗಿ ನಿರ್ವಹಿಸಿದ್ದರು. ಈಗ ಸವದಿ ಮತ್ತೊಮ್ಮೆ ಕುಮಟೊಳ್ಳಿಯನ್ನು ಅಥಣಿ ಕ್ಷೇತ್ರದಿಂದ ಎದುರಿಸುವ ಸಾಧ್ಯತೆಯಿದೆ.