ಬೆಳಗಾವಿ : ಒಂದು ವಾರದಿಂದ ಚಿರತೆ ಗಾಲ್ಫ ಕೋರ್ಸ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಂಡು ಬಾರದ್ದರಿಂದ ಶಿಕ್ಷಣ ಇಲಾಖೆಯು ಸೋಮವಾರದಿಂದ ಶಾಲೆಗಳನ್ನು ಪುನಃ ಪ್ರಾರಂಭಿಸಲು ತೀರ್ಮಾನಿಸಿದೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ ನಲತವಾಡ, ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಚಿರತೆ ಗಾಲ್ಫ ಕೋರ್ಸ ಮತ್ತು ಸುತ್ತಲಿನ ಪ್ರದೇಶ ಬಿಟ್ಟು ಹೋಗಿದೆ. ಅದರ ಪತ್ತೆಗಾಗಿ ಅಳವಡಿಸಲಾಗಿರುವ ಯಾವುದೇ ಕ್ಯಾಮೆರಾದಲ್ಲೂ ಕಳೆದ ಹತ್ತು ದಿನಗಳಿಂದ ಅದು ಪತ್ತೆ ಆಗಿಲ್ಲ. ಚಿರತೆ ಪತ್ತೆಗಾಗಿ ಗಾಲ್ಫ ಕೋರ್ಸ್ ನ ಪ್ರತಿ ಗಿಡ ಮರದ ಇಂಚ್ಚಿಂಚೂ ಜಾಗ ಹುಡುಕಲಾಗಿದೆ, ಎಲ್ಲಿಯೂ ಅದು ಚಿರತೆ ಕಂಡು ಬಂದಿಲ್ಲ.
ಹೀಗಾಗಿ ಚಿರತೆ ಪ್ರದೇಶ ಬಿಟ್ಟು ತೆರಳಿದೆ ಎಂಬ ನಿರ್ಧಾರಕ್ಕೆ ಬಂದು ಮುಚ್ಚಿರುವ ಶಾಲೆ ಪುನಃ ತೆರೆಯಬಹುದು ಎಂಬ ಅಭಿಪ್ರಾಯ ಸೂಚಿಸಲಾಗಿದೆ ಎಂಬ ಮೌಖಿಕ ಹೇಳಿಕೆಯನ್ವಯ ಶಾಲೆಗಳನ್ನು ಸೋಮವಾರದಿಂದ ಪುನಃ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಪಾಲಕರು ಮಕ್ಕಳನ್ನು ಶಾಲೆಗೆ ತಂದು ಬಿಡುವಾಗ ಮರಳಿ ಕರೆದುಕೊಂಡು ಹೋಗುವಾಗ ಎಚ್ಚರಿಕೆಯಾಗಿರಬೇಕು. ಮಕ್ಕಳು ಶಾಲೆಯಲ್ಲಿರುವಾಗ ಅವರ ಸುರಕ್ಷತೆ ಇರುತ್ತದೆ. ಯಾವುದೇ ಮಕ್ಕಳನ್ನು ಶಾಲೆ ಮುಗಿಯುವವರೆಗೆ ಹೊರಗೆ ಕಳುಹಿಸುವಂತಿಲ್ಲ, ಬಿಡುವಿನ ಅವಧಿಯಲ್ಲಿ ಶಿಕ್ಷಕರೇ ಮಕ್ಕಳನ್ನು ಗುಂಪಿನಲ್ಲಿ ಮೂತ್ರ ವಿಸರ್ಜನೆಗೆ ಕರೆದುಕೊಂಡು ಹೋಗಬೇಕು, ಕುಡಿಯುವ ನೀರನ್ನು ತರಗತಿಯೊಳಗೇ ಇಟ್ಟುಕೊಂಡಿರಬೇಕು. ಬಾಗಿಲು ಕಿಟಕಿಗಳನ್ನು ಹಾಕಿಕೊಂಡಿರಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಚಿರತೆ ಕಂಡು ಬಂದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಮತ್ತು ಗ್ರಾಮೀಣ ವಲಯದ ಹನ್ನೊಂದು ಶಾಲೆಗಳಿಗೆ ಕಳೆದ ಆಗಸ್ಟ 7ರಿಂದ ರಜೆ ನೀಡಲಾಗಿದೆ.