ಹೊಸದಿಲ್ಲಿ, ೨೬- ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜವಾಗಿಯೂ ಕಾಳಜಿಯಿದ್ದರೆ ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಎನ್. ಬಿರೇನ್ ಸಿಂಗ್ ಅವರನ್ನು ವಜಾಗೊಳಿಸಬೇಕು. ಇದು ಅವರು ಮಾಡಬೇಕಾದ ಮೊದಲ ಕೆಲಸವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಮಣಿಪುರ ಹಿಂಸಾಚಾರದ ವಿಚಾರವಾಗಿ ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮಣಿಪುರ ಹಿಂಸಾಚಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ ಶಾ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕಳೆದ 55 ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಹಿಂಸಾಚಾರದ ಬಗ್ಗೆ ಒಂದೇ ಒಂದು ಮಾತು ಆಡಲಿಲ್ಲ. ಪ್ರಧಾನಿ ಅವರ ಪ್ರತಿಕ್ರಿಯೆಗಾಗಿ ಇಡೀ ದೇಶವೇ ಎದುರು ನೋಡುತ್ತಿದೆ ಎಂದು ಅವರು ಹೇಳಿದರು.
ಮೊದಲಿಗೆ ಸರ್ಕಾರ ಎಲ್ಲ ಪಕ್ಷಗಳ ಜೊತೆ ಮಾತುಕತೆ ನಡೆಸಬೇಕು. ಉಗ್ರಗಾಮಿ ಸಂಘಟನೆ ಮತ್ತು ಸಮಾಜ ಘಾತುಕ ಶಕ್ತಿಗಳಿಂದ ಕದ್ದ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಭದ್ರತಾ ಪಡೆಯ ಸಹಾಯ ಪಡೆದುಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಗಳನ್ನು ಮುಕ್ತಗೊಳಿಸುವ ಮೂಲಕ ಅಗತ್ಯ ವಸ್ತುಗಳು ಜನರಿಗೆ ತಲುಪುವ ಹಾಗೆ ನೋಡಿಕೊಳ್ಳಬೇಕಿದೆ. ಹೆದ್ದಾರಿಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕಿದೆ ಎಂದು ಖರ್ಗೆ ಆಗ್ರಹಿಸಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ–ಪುನರ್ವಸತಿ ಕಲ್ಪಿಸಬೇಕು. ಈ ವಿಷಯದಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಘೋಷಿಸಿರುವ ಪರಿಹಾರ ಕ್ರಮಗಳು ಅಸಮರ್ಪಕವಾಗಿವೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.