ಸಿನೆಮಾ ರೀತಿ ಪೋಲೀಸರ ಮೇಲೆ ದಾಳಿ ಮಾಡಿ ಕಳ್ಳನನ್ನು ಬಿಡಿಸಿಕೊಂಡು ಹೋದ ಗುಂಪು!

A B Dharwadkar
ಸಿನೆಮಾ ರೀತಿ ಪೋಲೀಸರ ಮೇಲೆ ದಾಳಿ ಮಾಡಿ ಕಳ್ಳನನ್ನು ಬಿಡಿಸಿಕೊಂಡು ಹೋದ ಗುಂಪು!

ಗದಗ, ಜೂನ್ 29:  ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕರೆದೊಯ್ಯುವ ವೇಳೆ ಸಿನಿಮೀಯ ರೀತಿ ದುಷ್ಕರ್ಮಿಗಳ ಗುಂಪು ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಯನ್ನು ಬಿಡಿಸಿಕೊಂಡು ಪರಾರಿಯಾದ ಘಟನೆ ನಗರದ ಬೆಟಗೇರಿಯ ರೈಲ್ವೆ ಅಂಡರ್ ಬ್ರಿಜ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿ ನಡೆದಿದ್ದ ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಾಡು ಹಿಡಿದು ನಗರಕ್ಕೆ ಆಗಮಿಸಿದ್ದ ಗಂಗಾವತಿ ಶಹರ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಎಸ್.ಎಂ. ಕೃಷ್ಣ ನಗರದಲ್ಲಿ ವಾಸವಿದ್ದ ಅಮಜದಅಲಿ ಇರಾನಿ‌ ಎಂಬವನನ್ನು ವಶಕ್ಕೆ ಪಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸರಣಿಗಳ್ಳತನ ಪ್ರಕರಣದ ಆರೋಪಿ ಅಮಜದಅಲಿ ಇರಾನಿಯನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಐದಾರು ಜನರು ತಗಾದೆ ತೆಗೆದಿದ್ದರು. ನಂತರ ಪೊಲೀಸರು ತಾವು ತಂದಿದ್ದ ಇನ್ನೋವಾ ಕಾರಿನಲ್ಲಿ ಆರೋಪಿಯನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೆಟಗೇರಿಯ ರೈಲ್ವೆ ಅಂಡರ್ ಬ್ರಿಜ್ ನಲ್ಲಿ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿನ ಗಾಜು ಒಡೆದು ಮಾರಕಾಸ್ತ್ರಗಳಿಂದ ಮನಬಂದಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿದ್ದ ಆರೋಪಿಯನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.

ಗಂಗಾವತಿ ಶಹರ ಪೊಲೀಸರ ಠಾಣೆಯ ಎಎಸ್ ಐ ಶಿವಶರಣಗೌಡ. ಪೊಲೀಸ್ ಪೇದೆ ಮೈಲಾರಪ್ಪ ಸೊಂಪೂರ, ಹವಾಲ್ದಾರ ಮರಿಗೌಡ ಹೊಸಮನಿ, ಕಾರ್ ಡ್ರೈವರ್ ಶರಣಪ್ಪ ತಿಮ್ಮನಗೌಡ್ರ ಅವರಿಗೆ ಗಾಯಗಳಾಗಿವೆ.

ಸರಣಿಗಳ್ಳತನದ ಆರೋಪಿಯನ್ನು ಕರೆದೊಯ್ಯುಲು ಗಂಗಾವತಿ ಪೊಲೀಸರು ಖಾಸಗಿ ಇನೋವಾ ಕಾರ್ ಕೆಎ 22, ಝಡ್ 1632 ವಾಹನದಲ್ಲಿ ಗದಗ ನಗರಕ್ಕೆ ಬಂದಿದ್ದರು. ಆರೋಪಿ ಪತ್ತೆ ಹಚ್ಚಿ ಕರೆದೊಯ್ಯುವ ವೇಳೆ ಘಟನೆ ನಡೆದಿದ್ದು, ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ-ಬೆಟಗೇರಿಯ ಸಿಎಸ್​ಐ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಗದಗ ಪೊಲೀಸ ವರಿಷ್ಠ ನೇಮಗೌಡ ಆರೋಗ್ಯ ವಿಚಾರಿಸಿದರು. ಈ ವೇಳೆ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನ ವಶಕ್ಕೆ ಪಡೆಯಲು ಬಂದಾಗ ಹಲ್ಲೆ ನಡೆದಿದೆ. ಕಾರಿನ ಗ್ಲಾಸ್ ಒಡೆದು ಆರೋಪಿ ಪರಾರಿಯಾಗಲು ಸಹಾಯ ಮಾಡಿದ್ದಾರೆ. ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ. ದೂರಿನನ್ವಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ನಡುವೆ ಗದಗ ಬೆಟಗೇರಿ ಬಡಾವಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.