ಬೆಂಗಳೂರು: ಕಾಂಗ್ರೆಸ್ ಪಕ್ಷದ ಲಿಂಗಾಯತ ಮುಖಂಡರಾದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಸಮುದಾಯದ ನಾಯಕರಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಕೆಲವು ವಾರಗಳ ಹಿಂದೆ, ಲಿಂಗಾಯತ ಮುಖಂಡರು ಬೆಂಗಳೂರಿನಲ್ಲಿ ಸಭೆ ನಡೆಸಿ, ಉತ್ತರ ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಕರ್ನಾಟಕದಲ್ಲಿಯೂ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ಗಾಗಿ ಒತ್ತಾಯಿಸಿದ್ದರು. ಕರ್ನಾಟಕದಲ್ಲಿ ಶೇಕಡಾ 16 ರಷ್ಟು ಲಿಂಗಾಯತ ಮತದಾರರಿದ್ದಾರೆ. ದಕ್ಷಿಣ ಕರ್ನಾಟಕದ ಸುಮಾರು 100 ಕ್ಷೇತ್ರಗಳಲ್ಲಿ ಉತ್ತಮ ಪ್ರಾತಿನಿಧ್ಯಕ್ಕಾಗಿ ಅವರು ಕಸರತ್ತು ನಡೆಸುತ್ತಿದ್ದಾರೆ ಮತ್ತು ಈ ಪ್ರದೇಶದಲ್ಲಿ ಕನಿಷ್ಠ 10 ಸ್ಥಾನಗಳನ್ನು ಕೇಳುತ್ತಿದ್ದಾರೆ.
28 ಸ್ಥಾನಗಳಿರುವ ಬೆಂಗಳೂರು ನಗರದಲ್ಲಿ ಲಿಂಗಾಯತರಿಗೆ ಒಂದು ಅಥವಾ ಎರಡು ಸ್ಥಾನಗಳನ್ನು ನೀಡಬೇಕು, ಅಲ್ಲದೇ ದಕ್ಷಿಣದ ಎಲ್ಲಾ ಜಿಲ್ಲೆಗಳಾದ ತಿಪಟೂರು ಮತ್ತು ತುಮಕೂರಿನ ಚಿಕ್ಕನಾಯಕನಹಳ್ಳಿ, ಕೋಲಾರ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ನೀಡಬೇಕು. ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ. ಚಾಮರಾಜನಗರದ ಗುಂಡ್ಲುಪೇಟೆ, ಮೈಸೂರಿನ ಕೃಷ್ಣರಾಜ ಮತ್ತು ಕೊಡಗಿನ ಮಡಿಕೇರಿ-ಸೋಮವಾರಪೇಟೆಯಲ್ಲೂ ಇದೇ ಮಾದರಿಯನ್ನು ಪರಿಗಣಿಸಬೇಕು ಎಂದು ಸಮುದಾಯ ಹೇಳಿದೆ.
ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮುಖ್ಯಸ್ಥ ಡಿ ಕೆ ಶಿವಕುಮಾರ ಹಾಗೂ ಸ್ಕ್ರೀನಿಂಗ್ ಕಮಿಟಿ ಅಂತಿಮ ಪಟ್ಟಿಯ ಕೆಲಸ ಮಾಡುತ್ತಿದ್ದು, ಲಿಂಗಾಯತ ನಾಯಕರು ಖರ್ಗೆ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಮುಖಂಡರ ಮಾತುಗಳನ್ನು ಆಲಿಸಿರುವ ಖರ್ಗೆ ಅವರು ಸ್ಕ್ರೀನಿಂಗ್ ಕಮಿಟಿಯು ಪಟ್ಟಿ ಸಿದ್ಧಪಡಿಸುವವರೆಗೆ ಕಾದು ನಂತರ ಸಲಹೆಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ಹೆಚ್ಚಿನ ಸ್ಥಾನ ಗೆಲ್ಲಬೇಕಾದರೆ ಲಿಂಗಾಯತ ಮತಗಳು ಬೇಕು ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.