ಬೆಳಗಾವಿ : ಬಿಜೆಪಿಯ ಮೂಲವಾಗಿದ್ದ ರಾಜ್ಯದ ಲಿಂಗಾಯತರಿಗೆ ಈಗ ಆ ಪಕ್ಷ ಎಂತಹದೆಂದು ಅರಿವಾಗಿದೆ ಎಂದು ಶಾಸಕ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಸೋಮವಾರ ಬೆಳಗಾವಿಯ ಪಕ್ಷದ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ತತ್ವ, ಆದರ್ಶಗಳಿಗೆ ವಿರುದ್ಧವಾದ ಉದ್ದೇಶಗಳನ್ನು ಹೊಂದಿರುವ ಬಿಜೆಪಿಯನ್ನು ಕಳೆದ ಸುಮಾರು 20 ವರುಷಗಳಿಂದ ಲಿಂಗಾಯತರು ಬೆಂಬಲಿಸಿದ್ದರು. ಯಡಿಯೂರಪ್ಪನವರ ಕಾರಣ ಆ ಪಕ್ಷವನ್ನು ಅಪ್ಪಿಕೊಂಡು ಬಸವಣ್ಣನವರ ತತ್ವ ಸಿದ್ಧಾಂತ ಗಳನ್ನು ಬದಿಗಿಟ್ಟು ಸಮೂಹಸನ್ನಿಗೊಳಗಾದವರಂತೆ
ಬಿಜೆಪಿಯ ತತ್ವ ಆದರ್ಶಗಳನ್ನೇ ಪಾಲಿಸಿ ಅದನ್ನು ಅಧಿಕಾರಕ್ಕೆ ತಂದರು. ಬ್ರಾಹ್ಮಣರ ಪಕ್ಷವಾಗಿದ್ದ ಬಿಜೆಪಿಯನ್ನು ತಮ್ಮದೇ ಪಕ್ಷವಾಗಿ ಮಾಡಿಕೊಂಡರು.
ಆದರೆ 30 ವರುಷದಿಂದ ಹೆಗಲ ಮೇಲೆ ಹೊತ್ತು ಸಾಕಿ ಸಲುಹಿದ ಲಿಂಗಾಯತ ನಾಯಕರಾದ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಅವರನ್ನು ಬಿಜೆಪಿ ಯಾವ ರೀತಿಯಿಂದ ಸಂಚು ಮಾಡಿ ಅವರು ಪಕ್ಷದಿಂದ ಹೊರ ನಡೆಯುವಂತೆ ಮಾಡಿತು ಎಂಬವುದು ಈಗ ಲಿಂಗಾಯತರಿಗೆ ಅರಿವಾಗುತ್ತಿದ್ದು ಬಿಜೆಪಿ ತಮ್ಮನ್ನು ಹೇಗೆ ಬಳಸಿಕೊಂಡು ಬಿಸಾಡಿತು ಎಂಬುವುದು ಈಗ ಗೊತ್ತಾಗಿದೆ. ಕೇಸರಿ ಪಕ್ಷ ಈಗ ತನ್ನ ನಿಜವಾದ ಬಣ್ಣ ತೋರಿಸಿದೆ ಎಂದು ಅವರು ಹೇಳಿದರು.
ಇನ್ನಾದರೂ ಬಸವಣ್ಣನ ಹಿಂಬಾಲಕರು ಬಿಜೆಪಿ ಮುಂತಾದ ವಂಚಕ, ಸ್ವಾರ್ಥ, ಮನುವಾದಿ ಸಂಘಟನೆ ಪಕ್ಷಗಳಿಂದ ಅಂತರ ಕಾಯ್ದುಕೊಂಡು ಹೋಗುವ ನಿರ್ಧಾರ ಮಾಡಬೇಕೆಂದು ಲಿಂಗಾಯತರು ಮತ್ತು ಬಿಜೆಪಿಯಲ್ಲಿರುವ ಬ್ರಾಹ್ಮನೇತರರಿಗೆ ಕರೆ ನೀಡಿದರು.
ಲಿಂಗಾಯತ ಮುಖಂಡ ಯಡಿಯೂರಪ್ಪರಿಂದ ಅಧಿಕಾರ ಪಡೆದ ಬಿಜೆಪಿ ಅವರನ್ನು ಹೇಗೆ ನಡೆಸಿಕೊಂಡಿತು, ಎಷ್ಟೊಂದು ಕಷ್ಟ ಕೊಟ್ಟಿತು, ಮುಖ್ಯಮಂತ್ರಿ ಸ್ಥಾನದಿಂದ ಹೇಗೆ ತೆಗೆಯಿತು, ಶೆಟ್ಟರ್, ಸವದಿಗೆ ಯಾಕೆ ಟಿಕೆಟ್ ಕೊಡಲಿಲ್ಲವೆಂದು ಲಿಂಗಾಯತರು ಅರಿತುಕೊಳ್ಳಬೇಕು ಎಂದು ಜಾರಕಿಹೊಳಿ ವಿನಂತಿಸಿಕೊಂಡರು.