ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಬೇಗನೆ ಆಗಲಿದ್ದು, ಅನೇಕ ಸುದ್ಧಿ ಮಾಧ್ಯಮಗಳು ಮತ್ತು ಖಾಸಗಿ ಎಜೆನ್ಸಿಗಳು ಸಮೀಕ್ಷೆಗಳನ್ನು ನಡೆಸುತ್ತಿವೆ. ಈ ವರೆಗೆ ಬಹಿರಂಗಗೊಂಡ ಸಮೀಕ್ಷೆಗಳೆಲ್ಲ ಆಡಳಿತರೂಢ ಬಿಜೆಪಿಗೆ ಆಘಾತಕಾರಿ ವರದಿಯನ್ನೇ ನೀಡಿವೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ದೊರೆಯಲಿದೆ ಹಾಗೂ ಹಳೆ ಮೈಸೂರುಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು‘ಲೋಕ್ ಪೋಲ್ʼ ಎಂಬ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.
ಆಡಳಿತಾರೂಢ ಬಿಜೆಪಿ 2018ರಲ್ಲಿ ಪಡೆದದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದ್ದು, ಸಮೀಕ್ಷಾ ವರದಿಯ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇದರಪ್ರಕಾರ, ಕಾಂಗ್ರೆಸ್ಗೆ ಶೇ 39ರಿಂದ 42ರ ಮತಹಂಚಿಕೆಯೊಂದಿಗೆ 116ರಿಂದ 122 ಸ್ಥಾನ ದೊರೆಯಲಿದೆ. ಬಿಜೆಪಿಗೆ 77ರಿಂದ 83 ಹಾಗೂ ಜೆಡಿಎಸ್ 21ರಿಂದ 27 ಸ್ಥಾನ ಗಳಿಸಲಿವೆ. ಪಕ್ಷೇತರರು ಮತ್ತು ಸ್ವತಂತ್ರ ಅಭ್ಯರ್ಥಿಗಳು ಶೇ6ರಿಂದ 9ರ ಮತ ಹಂಚಿಕೆಯೊಂದಿಗೆ 1ರಿಂದ 4 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ 10ರಿಂದ 13 ಸ್ಥಾನ ಪಡೆಯಬಹುದು ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ 21 ರಿಂದ 24 ಸ್ಥಾನ ಪಡೆದರೆ ಜೆಡಿಎಸ್ 14ರಿಂದ 17 ಸ್ಥಾನ ಪಡೆಯಬಹುದು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ಗೆ ಗರಿಷ್ಠ, 24ರಿಂದ 27 ಕಡೆ ಗೆಲುವು ದೊರೆಯಲಿದೆ. ಬಿಜೆಪಿಗೆ 9ರಿಂದ 13 ಮತ್ತು ಜೆಡಿಎಸ್ 0-2 ಹಾಗೂ ಇತರರು 0-2 ಸ್ಥಾನ ಪಡೆಯಬಹುದು ಎಂದು ಸಮೀಕ್ಷಾ ವರದಿ ಹೇಳಿದೆ.
ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ಗೆ 19-23, ಬಿಜೆಪಿಗೆ 11-14 ಹಾಗೂ ಜೆಡಿಎಸ್ಗೆ 1-4 ಸ್ಥಾನ ದೊರೆಯಬಹುದು ಎಂದು ಸಮೀಕ್ಷೆ ಹೇಳಿದೆ. ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಬಲ ನೆಲೆ ವಿಸ್ತರಿಸಲಿದೆ. ಈ ಪ್ರದೇಶದಲ್ಲಿ ಕೇಸರಿ ಪಾಳೆಯವು 27-30 ಸ್ಥಾನ ಪಡೆದರೆ, ಕಾಂಗ್ರೆಸ್ 19-22, ಜೆಡಿಎಸ್ 0-1 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
ಬಿಜೆಪಿಯ ಭದ್ರ ಕೋಟೆ ಎಂದೇ ಪರಿಗಣಿಸಲಾಗಿರುವ ಕರಾವಳಿ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ 14-17 ಸ್ಥಾನ, ಕಾಂಗ್ರೆಸ್ಗೆ 7-10 ಸ್ಥಾನ ಹಾಗೂ ಜೆಡಿಎಸ್ಗೆ 0-1 ಸ್ಥಾನ ದೊರೆಯಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10-13, ಕಾಂಗ್ರೆಸ್ಗೆ 7-10 ಹಾಗೂ ಜೆಡಿಎಸ್ಗೆ 0-1 ಸ್ಥಾನ ದೊರೆಯಬಹುದು.
ಜನವರಿ 15ರಿಂದ ಫೆಬ್ರುವರಿ 28ರ ನಡುವಣ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 224 ಮಂದಿಯಂತೆ ಸಮೀಕ್ಷೆಗೆ ಒಳಪಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 30 ಮತಗಟ್ಟೆ ವ್ಯಾಪ್ತಿಗಳನ್ನು ಬಳಸಿಕೊಂಡು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಒಟ್ಟು 45,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಭ್ರಷ್ಟಾಚಾರ, ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆ ಆಡಳಿತ ವಿರೋಧಿ ಅಲೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಎಂದು ‘ಲೋಕ ಪೋಲ್’ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.