ನಿಪ್ಪಾಣಿ, ೧೯- : ವ್ಯಕ್ತಿಯೊಬ್ಬರ ಆಸ್ತಿ ಉತಾರದಲ್ಲಿ ಹೆಸರು ನೋಂದಣಿ ಮಾಡಲು ಲಂಚ ಪಡೆದುಕೊಂಡಿದ್ದ ನಿಪ್ಪಾಣಿಯ ಉಪ ತಹಸೀಲ್ದಾರ ಅಜೀತ ಬೋಂಗಾಳೆ ಮತ್ತು ಗ್ರಾಮ ಲೆಕ್ಕಾಧಿಕಾರಿ ಪಾರೀಸ ಸತ್ತಿ ಅವರನ್ನು ಬೆಳಗಾವಿಯ ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರಾಜಕುಮಾರ ಶಿಂಧೆ ಎಂಬವರು ತಮ್ಮ ಆಸ್ತಿ ಉತಾರದಲ್ಲಿ ಹೆಸರು ನೋಂದಣಿ ಮಾಡಲು ಅರ್ಜಿ ನೀಡಿದ್ದರು. ಗ್ರಾಮ ಲೆಕ್ಕಿಗ ಸತ್ತಿ ಕೆಲಸ ಮಾಡಿಕೊಡಲು ಶಿಂಧೆಯವರಿಂದ 10,000 ರೂಪಾಯಿ ಲಂಚ ಕೇಳಿದ್ದರು. ಲಂಚ ನೀಡಲು ಮನಸಿಲ್ಲದ ಅವರು ಬೆಳಗಾವಿ ಲೋಕಾಯುಕ್ತರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನದಂತೆ ಬುಧವಾರ ಸಂಜೆ ಸತ್ತಿ ಅವರಿಗೆ 10,000 ರೂಪಾಯಿ ನೀಡುವಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಸತ್ತಿಯನ್ನು ಬಂಧಿಸಿ ಲಂಚದ ಹಣವನ್ನು ವಶಕ್ಕೆ ಪಡೆದುಕೊಂಡರು.
ಪ್ರಾಥಮಿಕ ವಿಚಾರಣೆಯಲ್ಲಿ ಸತ್ತಿ 10,000 ರೂಪಾಯಿಯಲ್ಲಿ ತನ್ನದೂ ಮತ್ತು ಉಪ ತಹಸೀಲ್ದಾರ ಬೋಂಗಾಳೆಯದೂ ಸಮ ಪಾಲಿತ್ತು ಎಂದು ಹೇಳಿಕೆ ನೀಡಿದ್ದರಿಂದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.