ವಿಜಯಪುರ : ವಿಜಯಪುರದ ಉಪ ಲೋಕಾಯುಕ್ತ ವರಿಷ್ಠಾಧಿಕಾರಿ ಅರುಣ ನಾಯಕ ಅವರು ಬ್ಯಾಡ್ಮಿಂಟನ್ ಆಡುವಾಗ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಅವರಿಗೆ 58 ವರುಷ ವಯಸಾಗಿತ್ತು.
ಬುಧವಾರ ಸಂಜೆ ಕೆಲಸದ ಅವಧಿ ಮುಗಿದ ನಂತರ ಯಥಾ ಪ್ರಕಾರ ಸ್ನೇಹಿತರೊಂದಿಗೆ ಅವರು ಬ್ಯಾಡ್ಮಿಂಟನ್ ಆಟವಾಡುತ್ತಿದ್ದರು. ಆಗ ಏಕಾಎಕಿ ಕುಸಿದು ಬಿದ್ದರು. ಕೂಡಲೇ ಅವರನ್ನು ವಿಜಯಪುರ ನರ್ಸಿಂಗ್ ಹೋಮಗೆ ಸೇರಿಸಲಾಯಿತು. ಆದರೆ ರಾತ್ರಿ ಸುಮಾರು 8.30ಕ್ಕೆ ಅವರು ಕೊನೆಯುಸಿರೆಳೆದರು. ಅವರನ್ನು ಪರೀಕ್ಷಿಸಿದ ವೈದ್ಯರು ಅವರಿಗೆ ಆಟವಾಡುವಾಗ ಹೃದಯಾಘಾತವಾಗಿತ್ತು ಎಂದು ತಿಳಿಸಿದ್ದಾರೆ.
ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ನಾಯಕ ಅಗಲಿದ್ದಾರೆ. ನಾಯಕ ಅವರ ಪುತ್ರ ಬೆಂಗಳೂರಿನಲ್ಲಿ ವೈದ್ಯರಾಗಿದ್ದು, ಪತ್ನಿ ಮಗನೊಂದಿಗೆ ಅಲ್ಲಿಯೇ ಇದ್ದರು.
ಮಾಹಿತಿ ದೊರೆತ ತಕ್ಷಣ ವಿಜಯಪುರಕ್ಕೆ ಧಾವಿಸಿದ ಎಲ್ಲರೂ ನಾಯಕ ಅವರ ಪಾರ್ಥಿವ ಶರೀರವನ್ನು ಅವರ ಸ್ವಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಗೆ ತೆಗೆದುಕೊಂಡು ಹೋಗಿ ಗುರುವಾರ ಮುಂಜಾನೆ ಅಂತಿಮ ವಿಧಿ ನಿರ್ವಹಿಸಿದರು. ಲೋಕಾಯುಕ್ತ ಕಚೇರಿಯ ಅನೇಕ ಅವರ ಸಹೋದ್ಯೋಗಿಗಳು ಅಂತಿಮ ವಿಧಿಯಲ್ಲಿ ಭಾಗವಹಿಸಿದ್ದರು.
ಲೋಕಾಯುಕ್ತ ಡಿಎಸ್ ಪಿ ಆಗಿದ್ದ ನಾಯಕ ಅವರು 17-1-2022 ರಂದು ವಿಜಯಪುರಕ್ಕೆ ವರ್ಗಾವಣೆಯಾಗಿ ಬಂದಿದ್ದರು.