ಬೆಳಗಾವಿ : ಅಕ್ರಮ ಅಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಸೇರಿದಂತೆ ರಾಜ್ಯದ ಹತ್ತು ಕಡೆ ಏಕಕಾಲಕ್ಕೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದು ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬೆಳಗಾವಿ, ಬಾಗಲಕೋಟ, ಯಾದಗಿರಿ, ವಿಜಯನಗರ, ಕಲಬುರಗಿ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತರು ಕೋಟ್ಯಂತರ ರೂಪಾಯಿ ಹಣ, ಸ್ಥಿರಾಸ್ತಿ, ಚರಾಸ್ಥಿ, ಬಂಗಾರ, ಬೆಳ್ಳಿ ಪತ್ತೆ ಹಚ್ಚಿದ್ದಾರೆಂದು ತಿಳಿದು ಬಂದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇಖರ ಬಹುರೂಪಿಯವರ ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಬಂಗಲೆಯ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. 2019ರಲ್ಲಿ ಬಹುರೂಪಿ ಅವರು ಬೆಳಗಾವಿ ಹೆಸ್ಕಾಂ ನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಆಗ ಕೃಷ್ಣಾ ನದಿಗೆ ಮಹಾಪುರ ಬಂದು ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳಲ್ಲಿ ಪ್ರವಾಹವಾಗಿತ್ತು. ಆಗ ಬಹುರೂಪಿ ಅಥಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಸಾಕಷ್ಟು ಭ್ರಷ್ಟಾಚಾರವೆಸಗಿದ್ದರು ಎಂಬ ಆರೋಪದಡಿ ಅಮಾನತುಗೊಂಡಿದ್ದರೆನ್ನಲಾಗಿದೆ.
ಬಾಗಲಕೋಟದಲ್ಲಿ ಸಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದ್ಯಾಗಿರಿಯಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಬೀಳಗಿ ಸಹಾಯಕ ನಿರ್ದೇಶಕ ಕೃಷ್ಣ ಶಿರೂರ ಮನೆಗಳಲ್ಲಿ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಬ್ಬರು ಅಧಿಕಾರಿಗಳ ಮೇಲೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಪಿಡಬ್ಲೂಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ ಮನೆ ಹಾಗೂ ಸಂಬಂಧಿ ಶ್ರೀಕಾಂತ್ ಅಂಗಡಿ ಮನೆ ಮೇಲೆ ದಾಳಿ ಮಾಡಿದ್ದು, ಪಿಡಬ್ಲೂಡಿ ಇಲಾಖೆ ಬಸವನಬಾಗೇವಾಡಿ ವಿಭಾಗದಲ್ಲಿ ಪ್ರಭಾರಿ ಎಇಇ ಆಗಿ ಭೀಮನಗೌಡ ಬಿರಾದಾರ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಪುರ ನಗರದ ಆರ್ ಟಿ ಓ ಕಚೇರಿ ಹಿಂಭಾಗದಲ್ಲಿರುವ ಭೀಮನಗೌಡ ಬಿರಾದಾರ ಅವರ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಜೆಪಿ ಶೆಟ್ಟಿ ಅವರ ಸ್ವಗ್ರಾಮವಾದ ಸಾಸನೂರನಲ್ಲಿರುವ ಮನೆಯ ಮೇಲು ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ನಾಲ್ಕು ಕಡೆಗಳಲ್ಲಿ 3 ಡಿವೈಎಸ್ಪಿ,7 ಇನ್ಸಪೆಕ್ಟರ್ ನೇತೃತ್ವದಲ್ಲಿ ದಾಳಿಗೈದ ಮಾಹಿತಿಯಿದೆ.
ಕೆ ಆರ್ ಪುರದ ತಹಸೀಲ್ದಾರ ಅಜಿತ್ ರೈ ಅವರ ನಿವಾಸದ ಮೇಲೆಯೂ ದಾಳಿ ನಡೆದಿದೆ.