ವಿಜಯಪುರ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಿಧಿವಶರಾಗಿದ್ದಾರೆ. ಶ್ರೀಗಳು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಸಂಜೆ ಬಳಿಕ ಶ್ರೀಗಳ ಆರೋಗ್ಯ ಚಿಂತಾಜನಕವಾಗಿತ್ತು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ 1941 ರ ಅಕ್ಟೋಬರ್ 24 ರಂದು ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ. ಬಿಜ್ಜರಗಿ ಗ್ರಾಮದ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳವರನ್ನು ಆಶ್ರಯಿಸಿದರು. ಬಾಲಕನನ್ನು ಶ್ರೀಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಕರೆದೊಯ್ಯ ತೊಡಗಿದರು. ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ಅವರು ನೋಡಿಕೊಂಡರು. ಸಿದ್ದೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು ಎನ್ನಲಾಗಿದೆ.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಸಿದ್ಧೇಶ್ವರ ಸ್ವಾಮಿಗಳಿಗೆ ಕನ್ನಡದ ಜೊತೆ ಸಂಸ್ಕೃತ, ಇಂಗ್ಲೀಷ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿತ್ತು.
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳು ಕೊಲ್ಹಾಪುರದಲ್ಲಿ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ “ಸಿದ್ದಾಂತ ಶಿಖಾಮಣಿ “ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.
ಶ್ರೀಗಳು ತಮಗೆ ಭಾರತ ಸರ್ಕಾರ ಘೋಷಿಸಿದ್ದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಅತ್ಯುನ್ನತ ಪ್ರಶಸ್ತಿಗಳನ್ನು ನಿರಾಕರಿಸಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಮಂಗಳವಾರ ಸಂಜೆ 5 ಗಂಟೆಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದ್ದು ಕೆಲವು ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆಯ ವಿಧಿವಿಧಾನಗಳ ಬಗ್ಗೆ ಇಚ್ಛೆಯನ್ನು ಸ್ಪಷ್ಟವಾಗಿ ತಿಳಿಸಿದ್ದ ಶ್ರೀಗಳವರು ತಮಗಾಗಿ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂಬ ಸೂಚನೆ ನೀಡಿದ್ದರು ಎಂದು ಯೋಗಾಶ್ರಮದ ಅಧಿಕಾರಿಗಳು ತಿಳಿಸಿದ್ದಾರೆ.