ಬಾಗಲಕೋಟ, ೧೫- ಅವರಿಬ್ಬರು ಪ್ರೇಮಿಗಳು.. ಏಳೇಳು ಜನ್ಮಕ್ಕೂ ನಾವಿಬ್ಬರು ಒಂದಾಗಿರಬೇಕು ಎಂಬ ಕನಸನ್ನು ಹೊತ್ತು ಪ್ರೀತಿಯಲ್ಲಿ ತೇಲಾಡ್ತಿದ್ದರು. ಆದರೆ ಅಂದು ರಾತ್ರಿ ನಡೆದಿದ್ದೇ ಬೇರೆ. ಏಕಾಂತದಲ್ಲಿದ್ದ ಜೋಡಿ ಮೇಲೆ ಪೋಷಕರ ವಕ್ರದೃಷ್ಟಿ ಬಿದ್ದು ಎರಡು ಜೀವಗಳು ಬಲಿಯಾದವು. ಮಾಡಿದ ಪಾಪವನ್ನು ಮುಚ್ಚಿಹಾಕಲು, ಯುವತಿಯ ಪೋಷಕರು ಅಪಹರಣದ ನಾಟಕ ಸೃಷ್ಟಿಸಿ ನಿಟ್ಟುಸಿರು ಬಿಟ್ಟಿದ್ದರು.
ಆದರೆ, ವಿಧಿ ಲಿಖಿತ ಬೇರೆಯಾಗಿತ್ತು. ಆ ಒಂದು ಟಿ-ಶರ್ಟ್ ಅವತ್ತು ನಡೆದ ಕ್ರೂರ ಕೃತ್ಯದ ಕರಾಳ ಮುಖಗಳ ಅಸಲಿ ಕತೆಯನ್ನು ಬಿಚ್ಚಿಟ್ಟಿದೆ..!
ಏನಿದು ಪ್ರಕರಣ..?
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ 20 ವರ್ಷದ ಮಲ್ಲಿಕಾರ್ಜುನ ಜಮಖಂಡಿ ಹಾಗೂ ಕಳ್ಳಕವಟಗಿ ಗ್ರಾಮದ 18 ವರ್ಷದ ಗಾಯಿತ್ರಿ ಮಧ್ಯೆ ಪ್ರೇಮಾಂಕುರವಾಗಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸ್ತಿದ್ದರು. ಬಸ್ನಲ್ಲಿ ಕಾಲೇಜಿಗೆ ಹೋಗಿಬರುವಾಗ ಕಣ್ಣೋಟಗಳ ಮೂಲಕ ಚಿಗುರೊಡೆದಿದ್ದ ಪ್ರೇಮ, ಇಬ್ಬರನ್ನೂ ಬಲವಾಗಿ ಬಂಧಿಸಿಬಿಟ್ಟಿತ್ತು.
ಒಂದಿನ ಇಬ್ಬರ ಮನೆಯಲ್ಲೂ ಮಕ್ಕಳ ಪ್ರೇಮ ಕತೆ ಗೊತ್ತಾಗಿ ಬಿಡುತ್ತೆ. ಮುರ್ಯಾದೆಗೆ ಅಂಜುವ ಪೋಷಕರು ಇಬ್ಬರನ್ನೂ ಕೂರಿಸಿ ಬುದ್ಧಿ ಹೇಳಿದ್ದರು. ನಿಮ್ಮದು ಇನ್ನೂ ಸಣ್ಣ ವಯಸ್ಸು ಎಂದು ಪೋಷಕರು ಬುದ್ಧಿ ಹೇಳಿದ್ದರು. ಆದರೆ ಅವರಿಬ್ಬರ ನಡುವಿನ ಪ್ರೇಮ ಹಾಗೆಯೇ ಮುಂದುವರಿದಿತ್ತು.
ರಾತ್ರಿ ಪ್ರೇಯಸಿಯ ಭೇಟಿಗೆ ಹೋಗಿದ್ದ ಪ್ರಿಯಕರ
ಹೀಗಿದ್ದೂ ಪ್ರೀತಿಯನ್ನು ಮುಂದುವರಿಸಿದ್ದ ಮಲ್ಲಿಕಾರ್ಜುನ, ಸೆಪ್ಟೆಂಬರ್ 23ರಂದು ರಾತ್ರಿ ಬೈಕ್ ಮೇಲೆ ಕಳ್ಳಕವಟಗಿ ಗ್ರಾಮದ ಯುವತಿ ಗಾಯಿತ್ರಿ ಇರುವ ತೋಟಕ್ಕೆ ಹೋಗಿದ್ದ. ತೋಟದ ಶೆಡ್ನಲ್ಲಿ ಮಲ್ಲಿಕಾರ್ಜುನ-ಗಾಯಿತ್ರಿ ಮಲಗಿಕೊಂಡು ಗುಸುಗುಸು ಮಾತಾಡುತ್ತಿದ್ದರು. ಇದು ಗಾಯತ್ರಿ ತಂದೆ ಗುರಪ್ಪಗೆ ಗೊತ್ತಾಗಿ ಬಿಟ್ಟಿದೆ. ಅಷ್ಟಕ್ಕೆ ಸುಮ್ಮನಿರದ ಗುರಪ್ಪ, ಶೆಡ್ನ ಬಾಗಿಲನ್ನು ಹಾಕಿ ಜೋರು ಮಾಡಿದ್ದಾನೆ. ಮಾತ್ರವಲ್ಲ, ಮಲ್ಲಿಕಾರ್ಜುನಗೆ ನಿನ್ನ ಪೋಷಕರನ್ನು ಕರೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.
ಅತ್ತ ಅಪ್ಪ, ಪ್ರಿಯಕರನಿಗೆ ಎಚ್ಚರಿಕೆ ನೀಡುತ್ತಿದ್ದಂತೆಯೇ ಮರ್ಯಾದೆ ಹೋಗುತ್ತೆ ಎಂದು ಅಂಜಿದ ಗಾಯಿತ್ರಿ, ಶೆಡ್ನಲ್ಲಿದ್ದ ಕ್ರಿಮಿನಾಶಕ ಸೇವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಾಯತ್ರಿ ಸಾವನ್ನಪ್ಪಿದ ಬೆನ್ನಲ್ಲೇ ಗುರಪ್ಪ, ಅಜಿತ, ಆಕೆಯ ಅಜ್ಜ ಮಲ್ಲಪ್ಪ ಅವರುಗಳು ಸ್ಥಳಕ್ಕೆ ಬಂದು ಗಾಯಿತ್ರಿ ಸಾವಿಗೆ ನೀನೇ ಕಾರಣ ಎಂದು ಕಂಬಕ್ಕೆ ಕಟ್ಟಿ ಹಾಕಿ ಮಲ್ಲಿಕಾರ್ಜುನನಿಗೆ ಥಳಿಸಿದ್ದಾರೆ. ನಂತರ ಕ್ರಿಮಿನಾಶಕ ಕುಡಿಸಿ ಆತನ ಕೊಲೆಗೈದಿದ್ದಾರೆ.
ಕೊಲೆ ಮಾಡಿ ಏನ್ಮಾಡಿದ್ರು..?
ಸೆಪ್ಟೆಂಬರ 24ರಂದು ಬೆಳಗ್ಗೆ ಇಬ್ಬರ ಶವಗಳನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಹಿನ್ನೀರಿನಲ್ಲಿ ಬಿಸಾಕಲು ಪ್ಲಾನ್ ಮಾಡಿದ್ದಾರೆ. ಅಂತೆಯೇ ಕಾರಿನಲ್ಲಿ ಶವವನ್ನು ತೆಗೆದುಕೊಂಡು ಬಂದು ಕೋರ್ತಿ ಕೋಲ್ಹಾರ ಸೇತುವೆ ಹಿನ್ನೀರಿನಲ್ಲಿ ಬೀಸಾಕಿದ್ದಾರೆ. ಇಷ್ಟೆಲ್ಲಾ ಮಾಡಿದ ಗಾಯಿತ್ರಿ ಪೋಷಕರು ಅಕ್ಟೋಬರ 5ರಂದು ತಿಕೋಟಾ ಠಾಣೆಯಲ್ಲಿ ಅಪಹರಣದ ಪ್ರಕರಣ ದಾಖಲಿಸಿದ್ದರು. ಅಕ್ಟೋಬರ್ 6 ರಂದು ಮಲ್ಲಿಕಾರ್ಜುನ ಕುಟುಂಬಸ್ಥರು ನಾಪತ್ತೆ ಕೇಸ್ ದಾಖಲಿಸಿದ್ದಾರೆ.
ಅಕ್ಟೋಬರ 10ರಂದು ಬಾಗಲಕೋಟ ಜಿಲ್ಲೆ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕೃಷ್ಣಾ ನದಿಯ ಹಿನ್ನೀರಿನ ಹದರಿಹಾಳ ಗ್ರಾಮದ ಬಳಿ ಯುವಕನ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಪತ್ತೆ ವೇಳೆ ಕೊಲೆ ಶಂಕಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣವನ್ನು ಭೇದಿಸಲು ಬಾಗಲಕೋಟ ಜಿಲ್ಲಾ ಪೊಲೀಸ ವರಿಷ್ಠರು ವಿಶೇಷ ತಂಡವನ್ನ ರಚಿಸಿದ್ದರು.
ಪೊಲೀಸ್ ತನಿಖೆಗೆ ಸಹಾಯವಾಗಿದ್ದು ಅಪರಿಚಿತ ಶವದ ಮೇಲಿನ ಟೀ ಶರ್ಟ. ಟೀ ಶರ್ಟ ಮೇಲೆ ನಿಸರ್ಗ ಸ್ಪೋರ್ಟ್ಸ್ ಕ್ಲಬ್ ಬನಹಟ್ಟಿ -ಜಗದಾಳ ಅನ್ನುವ ಹೆಸರು ಇತ್ತು. ಇದರ ಜಾಡನ್ನು ಹಿಡಿದು ಪೊಲೀಸರು ಹೊರಟಿದ್ದರು. ಟೀ-ಶರ್ಟ ಮೇಲಿದ್ದ ನಿಸರ್ಗ ಸ್ಪೋರ್ಟ್ಸ್ ಕ್ಲಬ್ ನಡೆಸುತ್ತಿದ್ದ ಶಿವಾನಂದ ಮಾಳಿಯನ್ನು ಕೇಳಿದಾಗ ಯುವಕನ ಹೆಸರು, ವಿಳಾಸ ಪತ್ತೆಯಾಗಿದೆ.
ಕೊನೆಗೆ ಅನುಮಾನಗೊಂಡ ಪೊಲೀಸರು ಯುವತಿಯ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತೀವ್ರ ವಿಚಾರಣೆ ವೇಳೆ ಮಾಡಿದ ಪಾಪದ ಕೆಲಸವನ್ನು ಅವರು ಕಕ್ಕಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕೃಷ್ಣಾ ನದಿ ಹಿನ್ನೀರಿನಲ್ಲಿ ಪತ್ತೆಯಾಗಿದ್ದ ಅಪರಿಚಿತ ಯುವಕನ ಶವ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ತನಿಖಾಧಿಕಾರಿಗಳ ತನಿಖೆಯಲ್ಲಿ ಇದು ಸಹಜ ಸಾವಲ್ಲ, ಪ್ರೇಮ ಮತ್ತು ಕೊಲೆ ಅನ್ನುವುದು ಬಯಲಾಗಿದೆ. ಈ ಮೂಲಕ ಯುವಕನನ್ನು ಕೊಲೆಗೈದು ಅಪಹರಣ ಎಂದು ಬಿಂಬಿಸಿದ್ದ ಯುವತಿ ಕುಟುಂಬಸ್ಥರಿಗೆ ಬಿಗ್ ಶಾಕ್ ಆಗಿದೆ.