ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಮುಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ತರಲು ನಮ್ಮ ನಾಯಕರು ಹೇಳಿದ್ದಾರೆ. ಅದರಂತೆ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಗಡಿ ವಿವಾದ ವಿಚಾರ ಸೇರ್ಪಡೆ ಮಾಡಲಾಗುವುದು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಯಾವುದೇ ಜಾಗ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ದೇಶದಲ್ಲಿ ಕಾನೂನು, ಕೋರ್ಟ-ಕಚೇರಿ ಅಂತ ಇವೆ. ನಾವು ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಈಗ ಕೋರ್ಟನಲ್ಲಿದೆ. ನಮ್ಮ ತಂದೆ ಬಂಗಾರಪ್ಪನವರೇ ಬೆಳಗಾವಿಯಲ್ಲಿ ಮೊದಲ ಕನ್ನಡ ಮೇಯರ್ ಮಾಡಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಬೆಳಗಾವಿಯಲ್ಲಿ ಮೊದಲು ಕನ್ನಡ ಮೇಯರ್ ಮಾಡಲಾಗಿದೆ ಎಂದರು.
ಮಹಾರಾಷ್ಟ್ರದ ಕನ್ನಡಿಗರ ಮೇಲೆ ಅಲ್ಲಿಯ ಸರ್ಕಾರದಿಂದ ಅನ್ಯಾಯ ಆಗುತ್ತಿದ್ದು, ಮಹಾರಾಷ್ಟ್ರ ಕನ್ನಡಿಗರ ಪರ ಕಾಂಗ್ರೆಸ್ ಧ್ವನಿ ಯಾವಾಗಲೂ ಗಟ್ಟಿಯಾಗಿರುತ್ತದೆ. ಸರ್ಕಾರ ಸತ್ತಾಗ ಅದಕ್ಕೆ ಜನರ ಗೋಳು ಕೇಳಿಸುವುದಿಲ್ಲ, ಗೋವಾದಲ್ಲೂ ಇದೇ ರೀತಿ ಇದೆ. ಕಾನೂನು ಬದ್ಧ ಪರಿಹಾರಕ್ಕೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು. ಜತೆಗೆ ಮಾನವೀಯತೆಯಿಂದಲೂ ನೋಡಬೇಕು. ಗಡಿ ವಿವಾದ ಯಾವಾಗಲೂ ಚುನಾವಣೆ ಸಂದರ್ಭದಲ್ಲಿ ಬರುತ್ತದೆ ಎಂದರು.