ಮಹಾರಾಷ್ಟ್ರ ಸರ್ಕಾರದ ತಾರತಮ್ಯ: “ಕರ್ನಾಟಕ ಏಕೀಕರಣ ಸಮಿತಿ” ರಚನೆಗೆ ಚಿಂತನೆ

A B Dharwadkar
ಮಹಾರಾಷ್ಟ್ರ ಸರ್ಕಾರದ ತಾರತಮ್ಯ: “ಕರ್ನಾಟಕ ಏಕೀಕರಣ ಸಮಿತಿ” ರಚನೆಗೆ ಚಿಂತನೆ

ಜತ್ (ಮಹಾರಾಷ್ಟ್ರ ), ೨೧-  ಮಹಾರಾಷ್ಟ್ರದಲ್ಲಿ ಕನ್ನಡಿಗರು ಬಹುಸಂಖ್ಯಾತರಿರುವ ಗ್ರಾಮಗಳನ್ನು ಉದ್ದೇಶ ಪೂರ್ವಕವಾಗಿ ಅಭಿವೃದ್ಧಿಯಿಂದ ವಂಚಿತವಾಗಿಡಲಾಗಿದೆ. ನೀಡಿದ್ದ ಭರವಸೆಗಳನ್ನೂ ಈಡೇರಿಸದಿರುವುದರಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಬಹುಸಂಖ್ಯಾತ ಕನ್ನಡಿಗರು ಈಗ ರಾಜಕೀಯವಾಗಿ ಒಟ್ಟುಗೂಡುತ್ತಿದ್ದು “ಕರ್ನಾಟಕ ಏಕೀಕರಣ ಸಮಿತಿ” ಎಂಬ ಸಂಘಟನೆ ಸ್ಥಾಪಿಸಿಕೊಂಡು ಕರ್ನಾಟಕಕ್ಕೆ ಸೇರುವ ಕುರಿತು ಹೋರಾಟಕ್ಕೆ ಸನ್ನದ್ಧರಾಗುತ್ತಿದ್ದಾರೆ.

ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಪೂರ್ವ ಭಾಗದ ಗ್ರಾಮಗಳ ಜನರು ಮಹಾರಾಷ್ಟ್ರ ಸರಕಾರದ ವಿರುದ್ಧ ಬಹಿರಂಗವಾಗಿಯೇ ಸೆಡ್ಡು ಹೊಡೆದಿದ್ದಾರೆ. ತಮ್ಮ ಗ್ರಾಮಗಳಿಗೆ ನೀರಾವರಿ ಯೋಜನೆಯ ಮೂಲಕ ನೀರು ಪೂರೈಸದಿದ್ದರೆ ತಾವು ನೆರೆಯ ಕರ್ನಾಟಕಕ್ಕೆ ಸೇರುವದಾಗಿ ಎಚ್ಚರಿಕೆ ನೀಡುತ್ತಲೇ ಬಂದಿರುವ ಗ್ರಾಮಸ್ಥರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು “ಕರ್ನಾಟಕ ಏಕೀಕರಣ ಸಮಿತಿ” ರಚಿಸಿಕೊಂಡು ಹೋರಾಟ ನಿರ್ಧರಿಸಿದ್ದಾರೆ. ಅಲ್ಲದೇ ಜತ್ತ ತಾಲೂಕಿನ ತುಂಬ ಕನ್ನಡ ಫಲಕಗಳನ್ನು ಹಾಕುವದಾಗಿ ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲ ಅಧಿವೇಶನ ನಡೆದ ಸಂದರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳ ಮಧ್ಯೆ ಗಡಿವಿವಾದ ತಾರಕಕ್ಕೆ ಏರಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ಹೇಳಿಕೆ ನೀಡಿದ್ದರು. ತೀವ್ರ ನೀರಿನ ಅಭಾವದಿಂದ ಬಳಲುತ್ತಿರುವ ಜತ್ತ ತಾಲೂಕಿನ ಪೂರ್ವ ಭಾಗದ ಹಳ್ಳಿಗಳಿಗೆ ಮೈಶಾಳ ಏತ ನೀರಾವರಿ ಯೋಜನೆಯಿಂದ ನೀರು ಪೂರೈಸಲು ಎರಡು ಸಾವಿರ ಕೋಟಿ ರೂಪಾಯಿ ಒದಗಿಸುವದಾಗಿ ಆಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪ್ರಕಟಿಸಿದ್ದರಾದರೂ ಎಂಟು ತಿಂಗಳಾದರೂ ಇದುವರೆಗೆ ಯಾವದೇ ಕ್ರಮವಾಗಿಲ್ಲ.ಇದರಿಂದ ಅಸಮಾಧಾನಗೊಂಡಿರುವ ಗ್ರಾಮಸ್ಥರು ಭಾಷಾ ಭೇದವಿಲ್ಲದೇ ಮತ್ತೆ ಚಳವಳಿ ಆರಂಭಿಸಿದ್ದಾರೆ.

ಈಗಾಗಲೇ  ಸರದಿ ಉಪವಾಸ ಸತ್ಯಾಗ್ರಹ, ಬೈಕ್ ಮೆರವಣಿಗೆ ನಡೆಸಿದ್ದು ಮಹಾರಾಷ್ಟ್ರ ಸರಕಾರದಿಂದ ಯಾವದೇ ಸ್ಪಂದನೆ ಸಿಗದಾದಾಗ “ಕರ್ನಾಟಕ ಏಕೀಕರಣ ಸಮಿತಿ” ರಚನೆಗೆ ಹಾಗೂ ಕನ್ನಡ ಫಲಕಗಳನ್ನು ಹಾಕಲು ತೀರ್ಮಾನ ಕೈಕೊಂಡಿದ್ದಾರೆ. ಕರ್ನಾಟಕ ಗಡಿ ಭಾಗದಲ್ಲಿ  ಮರಾಠಿ ಜನರಿಗೆ ಕುಮ್ಮಕ್ಕು ನೀಡುವುದಕ್ಕಾಗಿ ಇಲ್ಲಿನ ಕೆಲ ಮರಾಠಿ  ಪತ್ರಿಕೆಗಳು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ(ಏಂಇಎಸ್)‌ನ್ನು  ಸದಾ ಪೋಷಿಸುತ್ತಲೇ ಬಂದಿರುವ ಮಹಾರಾಷ್ಟ್ರ ಸರಕಾರಕ್ಕೆ ಈಗ ದೊಡ್ಡ ಸವಾಲು ಎದುರಾಗಿದೆ.

ಕರ್ನಾಟಕದ ವಿರುದ್ಧ ಸದಾ ಕತ್ತಿ ಮಸೆಯುವ ಎಂಇಎಸ್‌ ಗೆ ಬೆನ್ನೆಲುಬಾಗಿ ನಿಲ್ಲುವ ಮಹಾರಾಷ್ಟ್ರ ನಾಯಕರಿಗೆ ಜತ್ತ ಭಾಗದಲ್ಲಿಯೇ ಕರ್ನಾಟಕ ಪರವಾಗಿ ಒಕ್ಕೊರಲಿನ ಕೂಗು ಕೇಳುವಂತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಪ್ರತಿಕ್ರಯಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.