ಬೆಳಗಾವಿ : ನಿರೀಕ್ಷೆಯಂತೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ ಸೇರಿದಂತೆ ಅಲ್ಲಿಯ ಸಂಸದರ ಬೆಳಗಾವಿ ಪ್ರವೇಶಕ್ಕೆ ಕರ್ನಾಟಕ ನಿಷೇಧ ವಿಧಿಸಿದೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೋಮವಾರ ಸಂಜೆ ಸಿಆರ್ ಪಿಸಿ 114 (3) ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
“ಸಚಿವರ ಭಾಷಣ, ಹೇಳಿಕೆಗಳು ರಾಜ್ಯದಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿಸಿ ಗಲಭೆ, ಹಿಂಸಾಚಾರ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಬಹುದು, ಹಾಗಾಗಿ ಅವರ ಭೇಟಿಗೆ ನಿಷೇಧ ವಿಧಿಸಲಾಗಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಚಿವರ ಪ್ರವೇಶಕ್ಕೆ ನಿಷೇಧವಿದ್ದರೂ ಮಹಾರಾಷ್ಟ್ರ ಮೂಲಕ ರಸ್ತೆ, ರೈಲು, ವಿಮಾನ ಮೂಲಕ ಜಿಲ್ಲೆ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.
ಪೊಲೀಸರು ಮಾತ್ರವಲ್ಲದೇ ಕನ್ನಡ ಸಂಘಟನೆಗಳ ನೂರಾರು ಕಾರ್ಯಕರ್ತರೂ ಗಡಿ ಕಾಯುತ್ತಿದ್ದಾರೆ. “ಎಂತಹ ಸ್ಥಿತಿ ಬಂದರೂ ಬೆಳಗಾವಿಯ ತಮ್ಮ ಭೆಟ್ಟಿ ತಡೆಯಲು ಸಾಧ್ಯವಿಲ್ಲ, ಯಾವುದೇ ಶಕ್ತಿಯಿಂದಲೂ ತಡೆಯಲು ಆಗೊಲ್ಲ” ಎಂದು ಕರ್ನಾಟಕಕ್ಕೆ ಸವಾಲು ಹಾಕುವ ಶೈಲಿಯಲ್ಲಿ ಮಾತನಾಡಿದ್ದ ಸಚಿವ ಪಾಟೀಲ ಮತ್ತು ದೇಸಾಯಿ ಅವರನ್ನು ತಡೆಯಲು ಮಾತ್ರವಲ್ಲದೇ ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲು ಬಣ್ಣದೊಂದಿಗೆ ತೆರಳಿದ್ದಾರೆ.
ಕರ್ನಾಟಕ ನಿಷೇಧ ವಿಧಿಸುವ ಮೊದಲು ಸೋಮವಾರ ಮಧ್ಯಾಹ್ನ ಮುಂಬಯಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರು, ಕರ್ನಾಟಕ ಕುರಿತ ಮಹಾರಾಷ್ಟ್ರ ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿದ್ದು ಇಂತಹ ಸಂಧರ್ಭದಲ್ಲಿ ಈ ತರಹದ ಭೆಟ್ಟಿ ವಿವಾದಕ್ಕೆ ಕಾರಣವಾಗುತ್ತದೆ. ಅಲ್ಲದೇ ಡಿ 6 ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ ಅವರು ವಿಧಿವಶರಾದ ದಿನ, ಇಂತಹ ದಿನದಲ್ಲಿ ಜನರ ನೆಮ್ಮದಿ ಭಂಗವಾಗುವದು ಬೇಡ ಎಂದು ಹೇಳಿ, ಸಚಿವರ ಭೆಟ್ಟಿ ಕುರಿತು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದೂ ತಿಳಿಸಿದ್ದರು.
ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ನಿಷೇಧ ಸಾಧ್ಯತೆ ಇದೆ ಎಂದು ಸಮದರ್ಶಿ ಮೊನ್ನೆಯೇ ಪ್ರಕಟಿಸಿತ್ತು.