ಬೆಳಗಾವಿ, ಡಿ.೩: ಮಕ್ಕಳ ದೇಹ ಸದೃಢವಾಗಿದ್ದರೆ ಮಾತ್ರ ಅವರ ಮನಸ್ಸು ಸದೃಢವಾಗಿರಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ಹೇಳಿದರು.
ನಗರದ ಪ್ರತಿಷ್ಠಿತ ಪೋದಾರ್ ಅಂತರ್ರಾಷ್ಟ್ರೀಯ ಶಾಲೆಯಲ್ಲಿ ಶುಕ್ರವಾರ ನಡೆದ ೧೦ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪಾಲಕರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಸತ್ವಯುತ ಹಾಗೂ ಸಮತೋಲಿತ ಆಹಾರ ನೀಡುವ ಮೂಲಕ ಅವರ ಆರೋಗ್ಯವೃದ್ಧಿಗೆ ಶ್ರಮಿಸಬೇಕೆಂದೂ ಡಾ. ಕೋಣಿ ಕರೆ ನೀಡಿದರು.
ಇನ್ನೋರ್ವ ಅತಿಥಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬೆಳಗಾವಿಯ ಯೋಗ ಸಾಧಕಿ ಕು. ನಕ್ಷತ್ರ ಶೆಟ್ಟಿ ಅವರು ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಒಮ್ಮೆಲೆ ಆಗುವುದಿಲ್ಲ, ಅದಕ್ಕೆ ಸತತ ಪರಿಶ್ರಮ ಅತ್ಯಗತ್ಯ ಎಂದರು.
ಇದೇ ಸಂದರ್ಭದಲ್ಲಿ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಪೋದಾರ್ ಅಂತಾರಾಷ್ಟ್ರೀಯ ಶಾಲೆಯ ಪ್ರಾಚಾರ್ಯರಾದ ರಾಜ್ ಹುಲಮನಿ, ಉಪ ಪ್ರಾಚಾರ್ಯರಾದ ಸಂಜೀವನಿ ಕಾಳೆ, ಆಡಳಿತಾಧಿಕಾರಿ ಚಂದ್ರಕಾಂತ ದೇಸಾಯಿ ಮತ್ತು ಮುಖ್ಯಾಧ್ಯಾಪಕಿ ಅನುರಾಧಾ ಚವ್ಹಾಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಹಾಜರಿದ್ದರು.