ಬೆಳಗಾವಿ, ೧೯- ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ‘ಮಹಾ ಮೇಳ’ ದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿಗೆ ಆಗಮಿಸುತ್ತಿದ್ದ “ಮಹಾರಾಷ್ಟ್ರ ವಿಕಾಸ ಅಘಾಡಿ” ಯ ಸುಮಾರು 500 ಕಾರ್ಯಕರ್ತರನ್ನು ರಾಜ್ಯ ಗಡಿ ಪ್ರವೇಶಿಸದಂತೆ ಕರ್ನಾಟಕ ಪೊಲೀಸರು ಕೊಗನೊಳ್ಳಿ ಚೆಕ್ ಪಾಯಿಂಟ್ ನಲ್ಲಿ ತಡೆದರು.
ಸೋಮವಾರ ಬೆಳಿಗ್ಗೆ ೧೧ ಗಂಟೆ ವೇಳೆಗೆ ಕರ್ನಾಟಕ ಮಹಾರಾಷ್ಟ್ರದ ಗಡಿಯ ವರೆಗೆ ವಿವಿಧ ವಾಹನಗಳಲ್ಲಿ ಬಂದಿದ್ದ ಕಾರ್ಯಕರ್ತರು ನಡೆದುಕೊಂಡು ಚೆಕ್ ಪಾಯಿಂಟ್ ಕಡೆಗೆ ಸೇತುವೆ ಮೇಲೆ ಬರುತ್ತಿದ್ದಂತೆ ತಡೆದ ಪೊಲೀಸರು ಅವರಿಗೆ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಈ ವಿಷಯದಲ್ಲಿ ಪೊಲೀಸ್ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ತಳ್ಳಾಟ ನಡೆಯಿತು.
ಚೆಕ್ ಪಾಯಿಂಟ್ ನಲ್ಲಿ ಬಲವಾದ ಬಂದೋಬಸ್ತ ಇದ್ದುದ್ದರಿಂದ ಕೆಲವು ಕಾರ್ಯಕರ್ತರು ಸೇತುವೆಯ ತಡೆಗೋಡೆ ಮೇಲೆ ನಿಂತು ಭಾಷಣ ಮಾಡಲು ಪ್ರಾರಂಭಿಸಿ ಕರ್ನಾಟಕದ ವಿರುದ್ಧ, ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಬೆಳಗಾವಿಯ ಮಹಾರಾಷ್ಟ್ರವಾದಿಗಳ ಸಂಪ್ರದಾಯಿಕ ಘೋಷಣೆಯಾದ “ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಮುಂತಾದ ಕರ್ನಾಟಕದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲೇ ಬೇಕೆಂದು ಕೂಗಿದರು.
ಕಾರ್ಯಕರ್ತರನ್ನು ತಡೆದು ಶಾಂತತೆ ಕಾಪಾಡಲು ಮುಂದಾದ ಪೊಲೀಸರೊಂದಿಗೆಯೂ ವಾಗ್ವಾದಕ್ಕಿಳಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.