ಬೆಳಗಾವಿ : ತಮ್ಮ ಮುಖಂಡರ ಮಾತಿನ ವಿಷಯದ ಸತ್ಯಾಸತ್ಯತೆ ಅರಿಯದೇ ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆಸಿ ಅವರ ತೇಜೋವಧೆಗೆ ಯತ್ನಿಸಿದ ಬಿಜೆಪಿ, ಹಿಂದೂ ಸಂಘಟನೆಗಳ ವಿರುದ್ಧ ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಕ್ಲಬ್ ರಸ್ತೆಯ ಬೆನನ್ ಸ್ಮಿತ್ ಕಾಲೇಜಿನಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಜನ ಭಾಗವಹಿಸಿ ಸರಕಾರ ಮತ್ತು ಸಂಘ ಪರಿವಾರದ ವಿರುದ್ಧ ಘೋಷಣೆ ಕೂಗಿದರು.
ಕೇಸರಿ, ನೀಲಿ ಬಣ್ಣದ ಮತ್ತು ಕನ್ನಡ ಧ್ವಜವನ್ನು ಹಿಡಿದಿದ್ದ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಅಭಿಮಾನಿಗಳು ರಾಣಿ ಚನ್ನಮ್ಮ ವೃತದಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಸಚಿವರಾದ ಶಶಿಕಲಾ ಜೊಲ್ಲೆ ಪ್ರತಿಕೃತಿ ದಹಿಸಿ, ಅವರ ವಿರುದ್ಧ ಘೋಷಣೆ ಕೂಗಿದರು.
ಕೆಪಿಸಿಸಿ ಕಾರ್ಯಧ್ಯಕ್ಷ ಆಗಿರುವ ಸತೀಶ ಜಾರಕಿಹೊಳಿ ಹಿಂದೂ ಶಬ್ದದ ಅರ್ಥದ ಕುರಿತು ನಿಪ್ಪಾಣಿಯ ಖಾಸಗಿ ಸಭೆಯೊಂದರಲ್ಲಿ ಆಡಿದ ಮಾತಿಗೆ ಅನರ್ಥ ಕಲ್ಪಿಸಿ, ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಿ ಅವರನ್ನು ಹಿಂದೂ ವಿರೋಧಿಯೆಂದು ತೋರಿಸುವ ಸಂಚು ಜರುಗಿತು. ಸತೀಶ ಜಾರಕಿಹೊಳಿ ಅವರನ್ನು ವಿರೋಧಿಸಿ ಪ್ರತಿಭಟನೆಗಳೂ ನಡೆದವು.
ತಮ್ಮ ವಿಚಾರಕ್ಕೆ, ಹೇಳಿಕೆಗೆ ಬದ್ದರಾಗಿದ್ದ ಸತೀಶ ಜಾರಕಿಹೊಳಿ ಅವರು, ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯಿದ್ದುದರಿಂದ ತಮ್ಮ ಹೇಳಿಕೆ ಹಿಂಪಡೆದು ತಮ್ಮ ಹೇಳಿಕೆ ತಿರುಚಿ ಅದನ್ನು ವ್ಯವಸ್ಥಿತ ಸಂಚನಾಗಿ ಬಿಂಬಿಸಿದವರ ಕುರಿತು ತನಿಖೆ ನಡೆಸಲು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನೂ ಬರೆದಿದ್ದರು. ಅಲ್ಲದೇ ಈ ವಿಷಯವನ್ನು ಅಲ್ಲಿಯೇ ಕೊನೆಗಾಣಿಸಲು ಸುದ್ಧಿ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದರು.
ಚನ್ನಮ್ಮ ವೃತದಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರಕಾರಕ್ಕೆ ಮನವಿ ಅರ್ಪಿಸಿ ಸತೀಶ ವಿರುದ್ಧ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದರು.