ಪ್ರತಿಸಲದಂತೆ ರಾಜ್ಯೋತ್ಸವದಂದು ‘ಕಪ್ಪು ದಿನ’ ಆಚರಿಸಲು ಎಂಇಎಸ್ ನಿರ್ಧಾರ

A B Dharwadkar
ಪ್ರತಿಸಲದಂತೆ ರಾಜ್ಯೋತ್ಸವದಂದು ‘ಕಪ್ಪು ದಿನ’ ಆಚರಿಸಲು ಎಂಇಎಸ್ ನಿರ್ಧಾರ

ಬೆಳಗಾವಿ, 12: ಕರ್ನಾಟಕ ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ‘ಕಪ್ಪುದಿನ’ ಆಚರಿಸಲು ಎಂದಿನಂತೆ ಮತ್ತೆ ನಿರ್ಧರಿಸಿದ್ದು, ಆ ದಿನದ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರದ ಸುಮಾರು ಒಂದು ಡಜನ್ ರಾಜಕಾರಣಿಗಳನ್ನು ಮತ್ತು ತನ್ನ ಪರ ಇರುವ ನಾಯಕರನ್ನು ಆಮಂತ್ರಿಸಲಿದೆ.

ರಾಜ್ಯೋತ್ಸವ ದಿನದಂದು ಶಹಾಪುರನಲ್ಲಿರುವ ಶಿವಾಜಿ ಉದ್ಯಾನವನದಿಂದ ಟಿಳಕವಾಡಿಯಲ್ಲಿ ಮೆರವಣಿಗೆ ನಡೆಸಿ ನಂತರ ಮರಾಠಾ ಮಂದಿರದಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲು ನಿರ್ಧರಿಸಲಾಗಿದೆ.

ಸಮಿತಿಯ ಮುಖಂಡರಾದ ವಿಕಾಸ ಕಲಘಟಗಿ ಮತ್ತು ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಗಡಿ ವಿಷಯಗಳ ‘ಸಮನ್ವಯ ಸಮಿತಿ’ ಯ ಮುಖಂಡರಾದ ಸಚಿವ ಚಂದ್ರಕಾಂತ ಪಾಟೀಲ, ಸಚಿವ ಶಂಭುರಾಜೆ ದೇಸಾಯಿ, ಲೋಕಸಭಾ ಸದಸ್ಯರಾದ ಸೀಮಾ ಪ್ರಜ್ನ, ಧರ್ಮಶೀಲ ಮಾನೆ, ಮಾಜಿ ಸಚಿವ, ರೈತ ಸಂಘಟನೆ ನಾಯಕರಾದ ಸದಾಭಾವು ಖೋತ ಸೇರಿದಂತೆ ಸುಮಾರು 12 ನಾಯಕರಿಗೆ ‘ಕಪ್ಪುದಿನ’ ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ನೀಡಲಾಗಿದೆ. ಇದಕ್ಕೆ ಕೆಲವರು ಒಪ್ಪಿಗೆ ನೀಡಿದ್ದು ಇನ್ನೂ ಕೆಲವರು ಸಮಯದ ಲಭ್ಯತೆಯ ಪ್ರಕಾರ ತಿಳಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾಡದ್ರೋಹಿಗಳ ಈ ನಿಯೋಜಿತ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದೆಂದು ಹಲವು ಕನ್ನಡ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿವೆ. ಆದರೆ, ‘ಕಪ್ಪುದಿನ’ ಆಚರಣೆಗಾಗಿ ಮೆರವಣಿಗೆ ನಡೆಸಲು ಅನುಮತಿ ಕೋರುತ್ತೇವೆ, ಅನುಮತಿ ದೊರೆಯದಿದ್ದರೂ ಆಚರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಮಿತಿ ನಾಯಕರು ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಹತ್ತಿರ ಬರುತ್ತಿದಂತೆ ಕರ್ನಾಟಕದಲ್ಲಿರುವ ಮರಾಠಿಗರ ಓಲೈಕೆಗೆ ಮುಂದಾಗಿರುವ ಮಹಾರಾಷ್ಟ್ರ ಸರಕಾರ ಬುಧವಾರ ಮುಂಬಯಿಯಲ್ಲಿ ಗಡಿ ಪ್ರದೇಶ ಕುರಿತು “ಉನ್ನತಾಧಿಕಾರ” ದ ಸಭೆ ಏರ್ಪಡಿಸಿತ್ತು. ಸಭೆಯಲ್ಲಿ  15 ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಆಸ್ಸಾಮ ಮತ್ತು ಮೇಘಾಲಯಗಳ ಗಡಿ ಸಮಸ್ಯೆ ಇತ್ಯರ್ಥ ಪಡಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಕರ್ನಾಟಕದಲ್ಲಿರುವ ಮರಾಠಿಗರ ಬೇಕು, ಬೇಡಗಳಿಗೆ ತೀವ್ರವಾಗಿ ಸ್ಪಂದಿಸಲು ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆ ಮಾಡುವುದು, ಕರ್ನಾಟಕದಲ್ಲಿರುವ ಮರಾಠಿಗರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ವಿಮೆ ನೀಡುವುದು, ಇದಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸೇರಿದಂತೆ ಹಲವು ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.

ಚಂದಗಡದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಚೇರಿಯಲ್ಲಿ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರಕ್ಕೆ ಸೇರಲು ಆಗ್ರಹಿಸಿರುವ 865 ಗ್ರಾಮ, ಪಟ್ಟಣ ಮತ್ತು ನಗರಗಳು ಮಹಾರಾಷ್ಟ್ರದ ಭಾಗಗಳಾಗಿವೆ ಎಂಬ ಕುರಿತು ಹಳೆಯ ದಾಖಲೆಗಳಿದ್ದರೆ ನೀಡಬಹುದು ಎಂದು ಆಗ್ರಹಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.