ಬೆಳಗಾವಿ : ಬರುವ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತರಾಗಿರುವ ಅಭ್ಯರ್ಥಿಗಳಿಂದ ತಲಾ 2 ಲಕ್ಷ ದೇಣಿಗೆ ಪಡೆದ ಕಾಂಗ್ರೆಸ್ ಮಾದರಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕೂಡ 50,000 ರೂಪಾಯಿ ದೇಣಿಗೆ ಪಡೆಯಲು ನಿರ್ದೇಶಸಿದೆ.
ಖಾನಾಪುರ ಸಮಿತಿ ಘಟಕ ಇತ್ತೀಚಿಗೆ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡಿದ್ದು ಸ್ಪರ್ಧೆ ಬಯಸುವ ಪ್ರತಿ ಅಭ್ಯರ್ಥಿಯೂ ನಿಗಧಿ ಪಡೆಸಿದ ದೇಣಿಗೆ ಮಾತ್ರವಲ್ಲದೇ ಸಂಘಟನೆಗೆ ಒಂದು ಮೊತ್ತವನ್ನು ಮರಳಿ ಪಡೆಯ ಬಹುದಾದ ಡೆಪಾಸಿಟ್ ಮಾಡಬೇಕಾಗುತ್ತದೆ. ದೇಣಿಗೆಯನ್ನು ಖಾನಾಪುರ ಪಟ್ಟಣದ “ಶಿವಸ್ಮಾರಕ” ದಲ್ಲಿರುವ ಕಚೇರಿಗೆ ಫೆಬ್ರವರಿ 10 ರಂದು ಮಧ್ಯಾಹ್ನ 2 ಗಂಟೆಯೊಳಗೆ ನೀಡಿ ರಸೀದಿ ಪಡೆಯಲು ಸೂಚಿಸಲಾಗಿದೆ. ಗೆಲುವು ಸಾಧಿಸುವ ಅಭ್ಯರ್ಥಿಗೆ ಟಿಕೆಟ್ ನೀಡಿ ಅವರ ಗೆಲುವಿಗೆ ಶ್ರಮಿಸಲಾಗುವದು.
ಸಮಿತಿಗೆ ಯಾವುದೇ ಆದಾಯದ ಮೂಲವಿಲ್ಲ. ಕಾರ್ಯಕರ್ತರು, ನಾಯಕರು ಅಷ್ಟು ಶ್ರೀಮಂತರೂ ಇಲ್ಲ. ಹಣವಿಲ್ಲದೇ ಚುನಾವಣೆ ಎದುರಿಸುವದು ಸಾಧ್ಯವೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ವೆಚ್ಚ ಮಾಡಲು ಹಣ ಬೇಕಿರುವದರಿಂದ ಕಾಂಗ್ರೆಸ್ ಮಾಧರಿಯಲ್ಲಿ ದೇಣಿಗೆ, ಡೆಪಾಸಿಟ್ ಸಂಗ್ರಹ ಮಾಡಲಾಗುವದು. ಪಡೆದ ಪ್ರತಿ ರೂಪಾಯಿಯ ಲೆಕ್ಕವನ್ನು ಕಾರ್ಯಕರ್ತರಿಗೆ ಮತ್ತು ಚುನಾವಣೆ ಆಯೋಗಕ್ಕೆ ನೀಡಲಾಗುವದು ಎಂದು ಖಾನಾಪುರ ತಾಲೂಕ ಸಮಿತಿ ಅಧ್ಯಕ್ಷ ಗೋಪಾಲ್ ದೇಸಾಯಿ ತಿಳಿಸಿದರು.
ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಸರ್ವೋಚ್ಯ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದೆ. ಇಂತಹ ಸ್ಥಿತಿಯಲ್ಲಿ ಮಹಾರಾಷ್ಟ್ರದ ವಾದವನ್ನು ದೃಢಗೊಳಿಸಲು ಚುನಾವಣೆ ಗೆಲ್ಲುವದು ಮುಖ್ಯವಾಗಿದೆ. ಕಳೆದ 66 ವರುಷಗಳಿಂದ ಗಡಿ ಹೋರಾಟ ಮಾಡುತ್ತಿರುವ ಕರ್ನಾಟಕದ ಮರಾಠಿಗರಿಗೆ ಇದು ಅಂತಿಮ “ಮಾಡು ಇಲ್ಲವೇ ಮಡಿ” ಹೋರಾಟ. ಹಾಗಾಗಿ ಯಾವುದೇ ಸ್ಥಿತಿಯಲೂ ಗೆಲ್ಲಲೇ ಬೇಕಾಗಿದೆ, ಎಂದು ದೇಸಾಯಿ ಹೇಳಿದರು.
ಆರು ದಶಕಗಳ ನಮ್ಮ ಹಿರಿಯರ ಹೋರಾಟ, ತ್ಯಾಗ, ಬಲಿದಾನ ವ್ಯರ್ಥವಾಗಬಾರದು. ನಮ್ಮ ಯುವಕರಿಗೆ ಸಮಿತಿಯ ಹೋರಾಟದ ಕುರಿತು ಮಾಹಿತಿ ನೀಡಿ ಅವರನ್ನು ಮುಂದಿನ ಹೋರಾಟಕ್ಕೆ ಸಿದ್ದಪಡಿಸುವ ಅಗತ್ಯವಿದೆ. ಒಮ್ಮೆ ಸರ್ವೋಚ್ಯ ನ್ಯಾಯಾಲಯದ ತೀರ್ಪು ವ್ಯತೀರಿಕ್ತವಾಗಿ ಬಂದರೆ ನಮ್ಮೆಲ್ಲ ಶ್ರಮ ವ್ಯರ್ಥವಾಗುತ್ತದೆ, ಹಾಗಾಗಿ ಈ ಚುನಾವಣೆ ನಮಗೆ ಬಹು ಮುಖ್ಯವೆಂದು ಯುವಕರಿಗೆ ತಿಳಿಸಬೇಕಾಗಿದೆ ಎಂದು ಸಮಿತಿಯ ಮಾಜಿ ಶಾಸಕ ದಿಗಂಬರ ಪಾಟೀಲ್ ತಿಳಿಸಿದರು.
ಕಳೆದ ಶತಮಾನದ 80ನೇ ದಶಕದಲ್ಲಿ ಬೆಳಗಾವಿ ಜಿಲ್ಲೆಯ 4-5 ಸ್ಥಾನ ಗೆಲ್ಲುತ್ತಿದ್ದ ಸಮಿತಿ ಬದಲಾದ ಸ್ಥಿತ್ಯಂತರದಲ್ಲಿ ನಶಿಸಿ ಹೋಗಿದ್ದು ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ಆಂತರಿಕ ಒಳ ಜಗಳ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯದವರ ವಿರೋಧಿ ಸಂಚು, ಬದಲಾದ ಮತದಾರರ ಮನಸ್ಥಿತಿಯಿಂದ ಖಾನಾಪುರನಲ್ಲಿ ಅಧಿಕಾರದಲ್ಲಿದ್ದ ಸಮಿತಿ ಒಮ್ಮೆ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸೋಲಿಸಲ್ಪಟ್ಟಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ, ವೃತಿಯಿಂದ ವೈದ್ಯರಾಗಿರುವ ಡಾ. ಅಂಜಲಿ ನಿಂಬಾಲ್ಕರ್ ಅವರಿಂದ ಸೋಲಿಸಲ್ಪಟ್ಟ ಸಮಿತಿ ಬಿಜೆಪಿ ನಂತರ ಮೂರನೇ ಸ್ಥಾನಕ್ಕೆ ಕುಸಿಯಿತು. ಹಿಂದುತ್ವ ಆಧಾರದ ಮೇಲೆ ಸ್ಪರ್ಧೆಸಿದ್ದ ಬಿಜೆಪಿ ಸಮಿತಿಗೆ ತೀವ್ರ ಹೊಡೆತ ಕೊಟ್ಟಿತ್ತು. ಅದರ ಸುಮಾರು ಮತದಾರರು ಅದರಲ್ಲೂ ಯುವಕರು ಬಿಜೆಪಿಗೆ ಮತ ಚಲಾಯಿಸಿದರೆ, ಕೃಷಿಕರು ಜೆಡಿಎಸ್ ನಿಂದ ಸ್ಪರ್ಧೆಸಿ ಸುಮಾರು 30,000 ಮತ ಪಡೆದ ನಾಸಿರ್ ಬಾಗವಾನ್ ಅವರಿಗೆ ಮತ ನೀಡಿದ್ದರು.
ಬೈಲಹೊಂಗಲ, ಕಿತ್ತೂರು, ಖಾನಾಪುರ ತಾಲ್ಲೂಕಿನ ಸಕ್ಕರೆ ಬೆಳೆಗಾರರ ಜೀವನಾಡಿಯಾಗಿರುವ ಎಂ ಕೆ ಹುಬ್ಬಳ್ಳಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಬಾಗವಾನ್ ಸಮಿತಿಯ ರೈತರ ಮತಗಳನ್ನು ಪಡೆದು ಅದರ ಸೋಲಿಗೆ ಪ್ರಮುಖ ಕಾರಣರಾದರು. ಬೆಳಗಾವಿ ಉತ್ತರ ಮತ್ತು ದಕ್ಷಿಣ ಮತ್ತು ನಿಪ್ಪಾಣಿ ಕ್ಷೇತ್ರಗಳನ್ನು ನೆಚ್ಚಿಕೊಂಡಿರುವ ಮಹಾರಾಷ್ಟ್ರವಾದಿ ಸಮಿತಿ ಅಲ್ಲಿಯೂ ಸ್ಪರ್ಧೆ ಬಯಸುವ ಅಭ್ಯರ್ಥಿಗಳಿಂದ ದೇಣಿಗೆ, ಡೆಪಾಸಿಟ್ ಪಡೆಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ಚುನಾವಣೆ ಸಮಿತಿಯ, ಅದರ ಬೆಂಬಲಿಗರ ಭವಿಷ್ಯ ನಿರ್ಧರಿಸಲಿದೆ.