ರಿಯಾದ್ (ಸೌದಿ ಅರೇಬಿಯಾ) : ವಿಶ್ವ ಫುಟ್‌ಬಾಲ್‌ನ ದಿಗ್ಗಜ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮುಖಾಮುಖಿಗೆ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ.
ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಫಹದ ಸ್ಟೇಡಿಯಂನಲ್ಲಿ ಜನವರಿ 19ರಂದು ನಡೆಯುವ ʻಸೌಹಾರ್ದ ಪಂದ್ಯʼದಲ್ಲಿ ವಿಶ್ವಶ್ರೇಷ್ಠ ಆಟಗಾರರಿಬ್ಬರೂ ಸೆಣೆದಾಡಲಿದ್ದಾರೆ.
ಮೆಸ್ಸಿ ಪ್ರತಿನಿಧಿಸುತ್ತಿರುವ ಫ್ರೆಂಚ್ ಲೀಗ್ ಚಾಂಪಿಯನ್ ತಂಡ, ಪ್ಯಾರಿಸ್ ಸೇಂಟ್ ಜರ್ಮನ್- ಪಿಎಸ್‌ಜಿ ಮತ್ತು ಸೌದಿ ಪ್ರೊ ಲೀಗ್‌ನ ಎರಡು ಅಗ್ರ ತಂಡಗಳಾದ ಅಲ್- ನಾಸರ್ ಮತ್ತು ಅಲ್- ಹಿಲಾಲ್ ತಂಡದ ಆಟಗಾರರನ್ನು ಒಳಗೊಂಡ ಆಲ್- ಸ್ಟಾರ್ ತಂಡದ ನಡುವೆ ʻಸೌಹಾರ್ದ ಪಂದ್ಯʼ ನಡೆಯಲಿದೆ.
ಇಬ್ಬರು ದಿಗ್ಗಜ ಆಟಗಾರರ ಸಮಾಗಮವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ಸೌಹಾರ್ದ ಪಂದ್ಯದ ಟಿಕೆಟ್‌ಗಾಗಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ಮಿಲಿಯನ್ ಸೌದಿ ರಿಯಾಲ್, ಟಿಕೆಟ್‌ಗಳ ಪ್ರಾರಂಭಿಕ ಬೆಲೆಯಾಗಿ ನಿಗದಿಪಡಿಸಲಾಗಿದೆ.
170 ದೇಶಗಳಿಂದ 20 ಲಕ್ಷಕ್ಕೂ ಅಭಿಮಾನಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸೌದಿ ಜನರಲ್ ಎಂಟರ್‌ಟೇನಮೆಂಟ್ ಅಥಾರಿಟಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷ ತುರ್ಕಿ ಅಲ್ ಶೇಖ ಪತ್ರಕರ್ತರಿಗೆ ತಿಳಿಸಿದ್ದಾರೆ.
ರಿಯಾದ್‌ನ ಕಿಂಗ್ ಫಹದ್ ಸ್ಟೇಡಿಯಂ 68,752 ಆಸನ ಸಾಮರ್ಥ್ಯವನ್ನು ಹೊಂದಿದ್ದು, ಜನವರಿ 17ರಂದು ಬಿಡ್ಡಿಂಗ್ ಮೂಲಕ ʻಅದೃಷ್ಟಶಾಲಿ ಪ್ರೇಕ್ಷಕʼರನ್ನು ಆಯ್ಕೆ ಮಾಡಲಾಗುವುದು ಎಂದು ಅರೇಬಿಕ್ ಅಲ್ ಎಖ್ಬರಿಯಾ ಮಾಧ್ಯಮ ವರದಿ ಮಾಡಿದೆ.
2020ರಲ್ಲಿ ಕೊನೆಯ ಬಾರಿಗೆ ಈ ಇಬ್ಬರು ದಿಗ್ಗಜ ಆಟಗಾರರು ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದರು. ರೊನಾಲ್ಡೊ ಪ್ರತಿನಿಧಿಸಿರುವ ತಂಡಗಳ ವಿರುದ್ಧದ ಪಂದ್ಯದಲ್ಲಿ ವಿಶ್ವಚಾಂಪಿಯನ್ ಮೆಸ್ಸಿ ಇದುವರೆಗೆ 26 ಗೋಲುಗಳನ್ನು ದಾಖಲಿಸಿದ್ದಾರೆ. ಮತ್ತೊಂದೆಡೆ ಪೋರ್ಚುಗೀಸ ನಾಯಕ ರೊನಾಲ್ಡೊ ಇದುವರೆಗೆ ಮೆಸ್ಸಿ ತಂಡದ ವಿರುದ್ಧ 21 ಬಾರಿ ಗೋಲು ಗಳಿಸಿದ್ದಾರೆ. ಗೆಲುವಿನಲ್ಲೂ (16), ವಿಶ್ವ ಚಾಂಪಿಯನ್ ತಂಡದ ನಾಯಕ ಮುಂದಿದ್ದು, ರೊನಾಲ್ಡೊ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.