ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಅನೇಕ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಲೆಕ್ಕವಿಲ್ಲದಷ್ಟು ನಷ್ಟವಾಗಿದೆ. ಮುಂದಿನ ಐದು ದಿನ ಅಂದರೆ ಸೆಪ್ಟೆಂಬರ್ 11ರವರೆಗೂ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಭಾಗದಲ್ಲಿ ಕಳೆದ ಎರಡು ವಾರದಿಂದ ಮುಂಗಾರು ಮಳೆ ಸುರಿಯುತ್ತಿದೆ. ಒಂದು ದಿನ ಮಳೆ ಕಡಿಮೆ ಆಗುವ ಲಕ್ಷಣ ಕಂಡು ಬಂದರೂ ಮರುದಿನವೇ ಮತ್ತೇ ಮಳೆ ಹೆಚ್ಚಾಗುತ್ತಿದೆ. ಇದಕ್ಕೆ ಹವಾಮಾನದಲ್ಲಿ ಅಕಾಲಿಕ ಬದಲಾವಣೆಗಳು ಎಂದು ತಜ್ಞರು ಅಂದಾಜಿಸಿದ್ದಾರೆ.
ಸೆಪ್ಟಂಬರ್ 11ರ ನಂತರ ಮಳೆ ಕಡಿಮೆಯಾಗುವ ಲಕ್ಷಣಗಳು ಸಹ ಇವೆ. ಅಷ್ಟರಲ್ಲಿ ಮತ್ತೆ ಹವಾಮಾನದಲ್ಲಿ ಏರಿಳಿತಗಳು ಕಂಡು ಬಂದರೆ ಮತ್ತೆ ಮಳೆ ಹೆಚ್ಚಾಗಬಹುದು. ಇಲ್ಲವೇ ಸಂಪೂರ್ಣವಾಗಿ ಇಳಿಕೆಯೂ ಆಗಬಹುದು. ಸದ್ಯದ ಹವಾಮಾನ ವರದಿ ಪ್ರಕಾರ ಮುಂದಿನ ಐದು ದಿನ ಮಿಂಚು ಸಹಿತ ಅತಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿಂದೆ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಹೆಚ್ಚಾಗಿತ್ತು. ಆದರೆ ಇದೀಗ ದೇಶದ ಅಂಡಮಾನ್ ಮತ್ತು ನಿಕೋಬಾರ್, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ, ಆಂಧ್ರ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಭಾರೀ ಮಳೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ವಿವಿಧೆಡೆ ಸೆಪ್ಟೆಂಬರ್ 11ರವರೆಗೆ ಮಳೆ ಮುಂದುವರಿಯಲಿದೆ. ಇದರಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ಹೆಚ್ಚು ಮಳೆ ಬೀಳಲಿದೆ. ಇನ್ನು ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ ನೀಡಲಾಗಿದೆ. ಮಲೆನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಒಳನಾಡಿನ ಇನ್ನಿತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂದಿನ 48 ಕೆಲವು ಕಡೆಗಳಲ್ಲಿ ಮಾತ್ರ ಸಾಧಾರಣವಾಗಿ ಮಳೆ ಬರಲಿದೆ. ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬುಧವಾರ ಒಂದು ದಿನ ಬೆಂಗಳೂರು ಯೆಲ್ಲೋ ಅಲರ್ಟ್ ಪಡೆದಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರುವ ಸಾಧ್ಯತೆ ಇದೆ.