ಬೆಳಗಾವಿ : ತಾಯಿ ಅಂತಃಕರಣದೊಂದಿಗೆ ಮಕ್ಕಳಿಗೆ ಆಟ, ಪಾಠ ಕಲಿಸುವ ಮಹಿಳೆಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶೇ.75 ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಬೇಕಾದ ಅಗತ್ಯವಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ,(ದಕ್ಷಿಣ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಗರ ವಲಯ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2022 ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಹೊಸದಾಗಿ 15000 ಶಿಕ್ಷಕ, ಶಿಕ್ಷಕಿಯರನ್ನು ನೇಮಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಈಗಾಗಲೇ 6ನೇ ತರಗತಿವರೆಗೆ ಪಾಠ ಬೋಧಿಸುತ್ತಿರುವ ಶಿಕ್ಷಕ, ಶಿಕ್ಷಕಿಯರನ್ನು 8ನೇ ತರಗತಿಯವರೆಗೆ ಬಡ್ತಿ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಸರ್ವ ಶಿಕ್ಷಣ ಅಭಿಯಾನದ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಮಕ್ಕಳ ಶೈಕ್ಷಣ ಕ ಪ್ರಗತಿಗಾಗಿ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಕ, ಶಿಕ್ಷಕಿಯರೂ ಬರೀ ಸಂಬಳಕ್ಕಾಗಿ ಶಿಕ್ಷಕರು ಅಂತ ಗುರುತಿಸಿಕೊಳ್ಳದೇ ಮಕ್ಕಳಲ್ಲಿ ದೇಶ ಪ್ರೇಮ ಬಿತ್ತುವ ಮೂಲಕ ಭವಿಷ್ಯದಲ್ಲಿ ಭಾರತ ರಾಷ್ಟ್ರದ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಗುರುತರ ಜವಾಬ್ದಾರಿ ಮೆರೆಯಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಶಿಕ್ಷಕರ ವೃಂದಕ್ಕೆ ಕಿವಿಮಾತು ಹೇಳಿದರು.
ಅತಿಥಿಯಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು, ಕೋವಿಡ್ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಸುಮಾರು 267 ಶಿಕ್ಷಕ, ಶಿಕ್ಷಕಿಯರ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ಕೊಡಲಾಗುವುದು ಹಾಗೂ ಬಡ ವಿದ್ಯಾರ್ಥಿಗಳಿಗೆ 100 ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ದೂರದಿಂದ ಶಾಲೆಗಳಿಗೆ ತೆರಳಲು ಸಾರಿಗೆ ಅನನುಕೂಲ ಆಗುತ್ತಿರುವುದು ಗಮನಕ್ಕೆ ಬಂದಿದೆ ಹೀಗಾಗಿ ಶಾಸಕರ ನಿಧಿಯಿಂದ ಬಸ್‍ಗಳನ್ನು ಖರೀದಿಸಿ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಶಾಸಕರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ ಅವರು, ಕೋವಿಡ್ ಕಾಲದಲ್ಲಿ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರಂತೆ ಶಿಕ್ಷಕ ಹಾಗೂ ಶಿಕ್ಷಕಿಯರೂ ಕೊರೊನಾ ವಾರಿಯರ್‍ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೋಂಕು ತಡೆಗಟ್ಟುವಲ್ಲಿ ಮಕ್ಕಳು ಸೇರಿದಂತೆ ಎಲ್ಲರನ್ನೂ ಜಾಗೃತಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ಆಟ, ಪಾಠ, ವಾತ್ಸಲ್ಯದೊಂದಿಗೆ ತಂದೆ ತಾಯಿಗಳಂತೆಯೇ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಿರುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಉತ್ತಮ ಬಾಂಧವ್ಯ ಹಾಗೂ ವಿಶ್ವಾಸಪೂರ್ಣ ಸಂಪ್ರದಾಯ ಸದಾ ಜೀವಂತವಾಗಿರಲಿ ಎಂದು ಶಾಸಕ ಅನೀಲ ಬೆನಕೆ ಅವರು ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸತ್ಕಾರ:
20221-2022ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇಲಾಖೆ ವತಿಯಿಂದ ಲ್ಯಾಪ್‍ಟಾಪ್ ವಿತರಿಸಿ ಪ್ರೋತ್ಸಾಹಿಸಿದರು.
ನಿವೃತ್ತ ಶಿಕ್ಷಕ/ಶಿಕ್ಷಕಿಯರಿಗೆ ಸತ್ಕಾರ:
ಪ್ರಸಕ್ತ ವರ್ಷದಲ್ಲಿ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ ಸುಮಾರು 40ಕ್ಕೂ ಹೆಚ್ಚು ಶಿಕ್ಷಕ, ಶಿಕ್ಷಕಿಯರನ್ನೂ ಇಲಾಖೆಯಿಂದ ಸತ್ಕರಿಸಿ, ನಿವೃತ್ತಿ ನಂತರದ ಬದುಕು ನೆಮ್ಮದಿಯಿಂದ ಕೂಡಿರಲಿ ಎಂದೂ ಗೌರವದೊಂದಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಸ್ಕೌಟ್ ಮತ್ತು ಗೈಡ್ಸ್ ಸೇವಾ ರತ್ನ ಪ್ರಶಸ್ತಿ:
ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗಮನಿಸಿ ವೇದಿಕೆ ಮೇಲೆ ಸ್ಕೌಟ್ ಗೈಡ್ಸ್ದವರನ್ನು ಸತ್ಕರಿಸಲಾಯಿತು. ಗುಣಮಟ್ಟದ ಸೇವೆ ಪರಿಗಣಿಸಿ ಸ್ಕೌಟ್ ಮತ್ತು ಗೈಡ್ಸ್ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿಯರ ಪ್ರಶಸ್ತಿ:
ಜಿಲ್ಲೆಯಲ್ಲಿ ಗುಣಮಟ್ಟದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ಶಿಕ್ಷಕಿಯರನ್ನು ಗುರುತಿಸಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ನೀಡಲಾಯಿತು. ಶಿಕ್ಷಕರ ಕಲ್ಯಾಣ ನಿಧಿಯಿಂದ 20 ಶಿಕ್ಷಕ/ಶಿಕ್ಷಕಿಯರಿಗೆ ಹಾಗೂ ಜಿಲ್ಲಾ ಪಂಚಾಯತದಿಂದ 21 ಶಿಕ್ಷಕ/ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೀಜಾ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಗಡೀತೆ ಪ್ರಸ್ತುತ ಪಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬಸವರಾಜ ನಾಲತವಾಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ದೇಶನೂರ, ರಾಜಶೇಖರ ನೇಗಿನಹಾಳ ಅಂಜನಾ ಮುರಗೋಡ ನಿರೂಪಿಸಿದರು.
ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಾಯ್.ಜೆ.ಭಜಂತ್ರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಡಯಟ್ ಮಣ್ಣೂರ ಪ್ರಭಾರಿ ಉಪನಿರ್ದೇಶಕರಾದ ಎಸ್.ಪಿ. ದಾಸಪ್ಪನವರ, ಎಸಿಪಿ ನಾರಾಯಣ ಭರಮಣ ಸೇರಿದಂತೆ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.