ರಾಂಚಿ, ೨೨- ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡ, ಗುಂಡಿಗಳಿಂದ ಬೇಸತ್ತ ಕಾಂಗ್ರೆಸ್ ಶಾಸಕಿಯೊಬ್ಬರು ರಸ್ತೆಯ ಹೊಂಡದ ನೀರಿನಲ್ಲಿ ಸ್ನಾನ ಮಾಡಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಅವರು ಗೊಡ್ಡಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಲ್ಲೇ ಸ್ನಾನ ಮಾಡಿದರು. ರಾಷ್ಟ್ರೀಯ ಹೆದ್ದಾರಿ ೧೩೩ ಹೊಂಡಗುಂಡಿಗಳಿಂದ ತುಂಬಿದ್ದು, ಮಳೆಯಿಂದಾಗಿ ಇಲ್ಲಿ ನೀರು ತುಂಬಿ ಈಜುಕೊಳದಂತಾಗಿತ್ತು. ರಸ್ತೆಯ ಅವ್ಯವಸ್ಥೆಯಿಂದ ಬೇಸತ್ತ ಶಾಸಕಿ ಕೂಡಲೇ ರಸ್ತೆ ದುರಸ್ಥಿಗೆ ಆಗ್ರಹಿಸಿ ಹೀಗೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮಹಾಗಾಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದೀಪಿಕಾ ಪಾಂಡೆ ಸಿಂಗ್ ಅವರು ರಸ್ತೆಯಲ್ಲಿರುವ ಹೊಂಡಕ್ಕೆ ಇಳಿದು ತಲೆಯಿಂದ ಕಾಲಿನವರೆಗೆ ಹೊಂಡದಲ್ಲಿ ತುಂಬಿದ ಕೆಸರು ನೀರನ್ನು ಸುರಿದುಕೊಂಡು ಸ್ನಾನ ಮಾಡಿದ್ದರು. ರಸ್ತೆ ಹೊಂಡದಲ್ಲಿ ಮುಳುಗೆದ್ದು ಇವರು ಸ್ನಾನ ಮಾಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಈ ಪ್ರತಿಭಟನೆ ಬಗ್ಗೆ ಮಾತನಾಡಿದ ದೀಪಿಕಾ ಸಿಂಗ್ ಅವರು, ಇದು ರಾಷ್ಟ್ರೀಯ ಹೆದ್ದಾರಿ 133, ಈ ಹೆದ್ದಾರಿ ಪ್ರಾಧಿಕಾರದವರು ರಸ್ತೆಯನ್ನು ರಿಪೇರಿ ಮಾಡಲು ಮೇ ತಿಂಗಳಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ಈ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ಆದರೆ ಈ ಹಾಳಾದ ರಸ್ತೆಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ಈ ರಸ್ತೆಯನ್ನು ಸರಿಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.
ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇವೆ. ಇದರಿಂದ ವಾಹನ ಸವಾರರು ಪರದಾಟ ನಡೆಸ್ತಿದ್ದಾರೆ ಎಂದು ಅವರು ಆರೋಪಿಸಿದರು.



