ಮೂಲಭೂತ ಸೌಕರ್ಯಗಳ ಸುಧಾರಣೆಗೆ ಆದ್ಯತೆ : ಮೋದಿ

A B Dharwadkar
ಮೂಲಭೂತ ಸೌಕರ್ಯಗಳ ಸುಧಾರಣೆಗೆ ಆದ್ಯತೆ : ಮೋದಿ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಮಂಗಳೂರು : ಮೂಲಭೂತ ಸೌಕರ್ಯಗಳ ಸುಧಾರಣೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದ್ದು, 3700 ಕೋಟಿ ರೂ. ಮೊತ್ತದ ಹೊಸ ಯೋಜನೆಯೊಂದಿಗೆ ನವ ಮಂಗಳೂರು ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಂಗಳೂರಿನ ಗೋಲ್ಡನ್ ಫಿಂಚ್ ಸಿಟಿ ಮೈದಾನದಲ್ಲಿ ಇಂದು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿಶ್ವ ದರ್ಜೆ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ಹಾಗೂ ಅತ್ಯುತ್ತಮ ರೀತಿಯಲ್ಲಿ ಬಂದರುಗಳ ಸಂಪರ್ಕತೆ ಹೊಂದಲು ಸರ್ಕಾರ ಒತ್ತು ನೀಡುತ್ತಿದೆ ಎಂದರು.

ಜನರ ಜೀವನ ಮಟ್ಟು ಸುಧಾರಿಸಲು ಹಾಗೂ ದೇಶದ ಆರ್ಥಿಕ ಪ್ರಗತಿಯನ್ನು ಸಾಧಿಸಲು ಡಬಲ್ ಎಂಜಿನ್ ಸರ್ಕಾರ ನೆರವಾಗುತ್ತಿದೆ. ಹೊಸ ಯೋಜನೆಗಳಿಂದ ರಾಜ್ಯದಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಅವರು ಹೇಳಿದರು.

ಐತಿಹಾಸಿಕ ಮಂಗಳೂರು ಬಂದರನ್ನು ಮೇಲ್ದರ್ಜೆಗೇರಿಸಿ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ, ಮೀನುಗಾರರು ತಮ್ಮ ಮೀನುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದರು.

ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾಗರಮಾಲಾ ಯೋಜನೆಯಿಂದ ಕರಾವಳಿಯಲ್ಲಿ ಮೂಲಸೌಕರ್ಯವನ್ನು ಬಲಗೊಳಿಸಲಾಗುತ್ತಿದೆ. ಸರಕಾರದ ಪ್ರಯತ್ನದಿಂದ ಕಳೆದ 8 ವರ್ಷಗಳಲ್ಲಿ ಮಂಗಳೂರು ಬಂದರಿನಲ್ಲಿ ವ್ಯಾಪಾರ ಚಟುವಟಿಕೆಗಳು ದ್ವಿಗುಣಗೊಂಡಿದೆ ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ ಮತ್ತು ಕರ್ನಾಟಕದಲ್ಲಿ 8 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಅನುಮೋದಿಸಲಾಗಿದೆ. ಸುಮಾರು 30 ಲಕ್ಷ ಗ್ರಾಮೀಣ ಕುಟುಂಬಗಳು ಪೈಪ್‌ಲೈನ್‌ನಲ್ಲಿ ನೀರು ಪಡೆಯುತ್ತಿವೆ ಎಂದು ಅವರು ತಿಳಿಸಿದರು.

ಆಯುಷ್ಮಾನ ಭಾರತ ಯೋಜನೆಯು 4 ಕೋಟಿ ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆಗೆ ಸಹಾಯ ಮಾಡಿದೆ ಮತ್ತು ಕರ್ನಾಟಕದಲ್ಲಿ 30 ಲಕ್ಷ ಬಡವರು ಇದರ ಪ್ರಯೋಜನ ಪಡೆದಿದ್ದಾರೆ. ಪಿಎಂ ಸ್ವ-ನಿಧಿ ಯೋಜನೆಯಿಂದ 2 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಹಾಯವಾಗಲಿದೆ. ಮೆಟ್ರೊ ಸಂಪರ್ಕ ಹೊಂದಿರುವ ನಗರಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದರು.

ಗ್ರಾಮೀಣ ಮಟ್ಟದಲ್ಲಿ 6 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಕುಶಲಕರ್ಮಿಗಳು, ಆಟೋ ರಿಕ್ಷಾ ಟ್ಯಾಕ್ಸಿ ಚಾಲಕರು ಇತ್ಯಾದಿಗಳಿಗೆ ನೆರವಾಗಲಿದೆ. ಜಾಗತಿಕ ಅಡೆತಡೆಗಳ ನಡುವೆಯೂ ನಾವು 670 ಶತಕೋಟಿ ಡಾಲರ್ ಅಥವಾ 50 ಲಕ್ಷ ಕೋಟಿ ಮೌಲ್ಯದಷ್ಟು ರಫ್ತು ಮಾಡಬಹುದು ಎಂದು ಪ್ರಧಾನಿ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.