ಹೊಸದಿಲ್ಲಿ, ೨೬- ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದು ಗೃಹ ಸಚಿವ ಅಮಿತ ಶಾ ನಿಷ್ಟ್ರಯೋಜಕರಾಗಿದ್ದಾರೆ ಮತ್ತು ಅಲ್ಲಿನ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಕಾರ್ಯಹೀನರಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ ರಮೇಶ ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಈ ವರೆಗೂ ಪರಿಸ್ಥಿತಿ ಹತೋಟೆಗೆ ಬಂದಿಲ್ಲ. ಮಣಿಪುರ ಶಾಂತಿಗೆ ಸಂಬಂಧಿಸಿದಂತೆ ಇಲ್ಲಿನ ಹರಕಿಶನ್ ಸಿಂಗ್ ಸುರ್ಜೀತ ಭವನದಲ್ಲಿ ರವಿವಾರ ರಾಷ್ಟ್ರೀಯ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿರುವ ಜೈರಾಮ ರಮೇಶ ಅವರು, ಸಂಘರ್ಷಪೀಡಿತ ಮಣಿಪುರದ ಪರಿಸ್ಥಿತಿ ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಯಾವುದೇ ವಿಚಾರವಾಗಿ ಸರ್ವಸಮ್ಮತಿ ಸೂಚಿಸಲು ಸಾಧ್ಯವಾಗದೇ ಇರಬಹುದು ಆದರೆ ಒಮ್ಮತಕ್ಕೆ ಬರಲು ಸಾಧ್ಯವಿದೆ. ಭಾರತ ಸಂವಿಧಾನ ರಚನೆಯಾಗಿದ್ದೇ ಹೀಗೆ. ಎಲ್ಲರಿಗೂ ಕಿವಿಯಾಗಿ, ಸಂವೇದನಾಶೀಲವಾಗಿದ್ದರೆ ಮಣಿಪುರದಲ್ಲಿ ಶಾಂತಿ ಪುನಃಸ್ಥಾಪನೆ ಸಾಧ್ಯವಿದೆ. ಇದು ಸುದೀರ್ಘ ಪ್ರಕ್ರಿಯೆ; ಒಂದು ವಾರದಲ್ಲಿ ಸಾಧ್ಯವಿಲ್ಲ. ಅದಕ್ಕೆ ಒಂದು ತಿಂಗಳು ಅಥವಾ ವರ್ಷಾನುಗಟ್ಟಲೆ ಸಮಯ ಬೇಕು ಎಂದು ಹೇಳಿದರು.
ಮಣಿಪುರದಲ್ಲಿ ಕೂಡಲೇ ಮುಖ್ಯಮಂತ್ರಿ ಬದಲಾವಣೆಯಾಗಬೇಕು ಎಂದು ಜೈರಾಮ ರಮೇಶ ಅವರು ಆಗ್ರಹಿಸಿದರು. ಯಾವುದೇ ತಾರತಮ್ಯ ಇಲ್ಲದೇ ನಿರ್ದಾಕ್ಷಿಣ್ಯವಾಗಿ ಎಲ್ಲಾ ಸಶಸ್ತ್ರ ಗುಂಪನ್ನು ನಿಶ್ಯಸ್ತ್ರೀಕರಣಗೊಳಿಸಬೇಕು ಮತ್ತು ನಂಬಿಕೆ, ಸಾಮರಸ್ಯದ ವಾತಾವರಣವನ್ನು ನಿರ್ಮಿಸಬೇಕು ಎಂದು ಹೇಳಿದರು.