ಬೆಳಗಾವಿ : ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸುವ ಯತ್ನ ಮಾಡಲು ಜಮಾಅತೆ ಇಸ್ಲಾಮಿ ಹಿಂದ್ ನ ಮಹಿಳಾ ಘಟಕ ಸೆಪ್ಟೆಂಬರ್ ತಿಂಗಳಿಡೀ ರಾಷ್ಟ್ರ ಮಟ್ಟದಲ್ಲಿ “ನೈತಿಕತೆಯೇ ಸ್ವಾತಂತ್ಯ” ಅಭಿಯಾನ ಆಯೋಜಿಸಿದೆ.
ಶನಿವಾರ ಬೆಳಗಾವಿಯಲ್ಲಿ ಈ ಕುರಿತು ರಾಜ್ಯ ಘಟಕದ ಪದಾಧಿಕಾರಿ ಸಾಜಿದಾ ಲಾಲ್ಮಯ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸಭೆಗಳು ಮಾತ್ರವಲ್ಲದೇ ಪ್ರತಿ ನಗರ, ಗಲ್ಲಿ, ಹೆಚ್ಚು ಜನ ಸೇರುವ ಸ್ಥಳ, ಉದ್ಯಾನವನ, ಶಾಲೆ ಕಾಲೇಜುಗಳಲ್ಲಿ ನುರಿತವರಿಂದ ಮಾಹಿತಿ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಎಲ್ಲ ರೀತಿಯ ದೌರ್ಜನ್ಯ ಹೆಚ್ಚಾಗಿದೆ. ಅತ್ಯಾಚಾರಕ್ಕೆ ವಯಸ್ಸಿನ ಮತ್ತು ಸಂಬಂಧಗಳಿಗೂ ಬೆಲೆಯಿಲ್ಲವಾಗಿದೆ. ವಿಷಾದದ ಸಂಗತಿ ಎಂದರೆ ಸಲಿಂಗ ಸಂಬಂಧ, ಲಿವ್ ಇನ್ ರಿಲೇಶನ್ ಶಿಪ್ ಹೆಚ್ಚಾಗಿದ್ದು ಜನರಿಗೆ ದೇವರ ಭಯವೇ ಇಲ್ಲದೆ ಪಾಪ ಅಧರ್ಮ ಹೆಚ್ಚಾಗಿದೆ. ಏನೂ ಅರಿಯದ ಅತೀ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಇವುಗಳನ್ನು ತಪ್ಪಿಸಲು ಪವಿತ್ರ ಜೀವನ ಜೀವಿಸಲು ಅರಿವಿನ ಅರಿವು ಅಗತ್ಯವಿರುವುದರಿಂದ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
“ನಮ್ಮ ಅಭಿಯಾನದಿಂದ ಕೆಲವೇ ಕೆಲವರ ಸುಧಾರಣೆಯಾದರೂ ನಮ್ಮ ಉದ್ದೇಶ ಸ್ವಾರ್ಥಕವಾದಂತೆ, ಅದಕ್ಕೆ ಪಾಲಕರು ತಮ್ಮ ಗಂಡು ಮಕ್ಕಳಿಗೆ ಅಭಿಯಾನದ ಕಾರ್ಯಕ್ರಮಕ್ಕೆ ಭಾಗವಹಿಸಲು ಸೂಚಿಸಬೇಕು” ಎಂದ ಸಾಜಿದಾ ಅವರು, ಅತ್ಯಾಚಾರಕ್ಕೊಳಗಾದ ಮಹಿಳೆಯ ಮುಂದಿನ ಜೀವನ ಎಷ್ಟು ಭೀಕರವಾಗಿರುತ್ತದೆ ಎಂದೂ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಅತ್ಯಾಚಾರಕ್ಕೆ ಮುಖ್ಯವಾಗಿ ಹಿಂದುಳಿದ ವರ್ಗದವರು, ಆದಿವಾಸಿಗಳು, ಅಲ್ಪಸಂಖ್ಯಾತ ವರ್ಗದವರು, ದಲಿತರು ಬಲಿಯಾಗುತ್ತಿದ್ದಾರೆ. ಪ್ರತಿನಿತ್ಯ ನೂರಾರು ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಕೋಲ್ಕತ್ತಾದ್ದ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ ರಾಷ್ಟ್ರದ ಗಮನ ಸೆಳೆದಿದೆ. ಸುರಕ್ಷಿತ ಮತ್ತು ಅಂತಹ ಉನ್ನತ ಸ್ಥಾನದಲ್ಲಿರುವವರಿಗೇ ರಕ್ಷಣೆಯಿಲ್ಲದ ಮೇಲೆ ಅಸುರಕ್ಷಿತ ಸ್ಥಳದಲ್ಲಿರುವ ಇತರ ಸ್ತ್ರೀಯರ ಸ್ಥಿತಿ ಹೇಗಿರಬಹುದು ಎಂದು ಅವರು ನುಡಿದರು.
“ಮಹಿಳೆ ಇಂದು ಯಾವುದೇ ಸ್ಥಳದಲ್ಲಿ ಸುರಕ್ಷಿತವಾಗಿಲ್ಲ, ಈ ವಿಷಯದಲ್ಲಿ ಪುರುಷರಿಗೆ ಸರಿಯಾದ ತಿಳಿವಳಿಕೆ ಅಗತ್ಯ. ಯುವಕರಿಗೆ ಕುಟುಂಬ ಜೀವನದ ಮಾಹಿತಿ ನೀಡುವುದರಿಂದ ಮಹಿಳೆಯರನ್ನು ಅವರು ನೋಡುವ ದೃಷ್ಟಿ ಬದಲಾಗಬಹುದು. ಇದಕ್ಕೆ ಅವರ ಪಾಲಕರ ನೆರವು ಸಹಕಾರವಿದ್ದರೆ ದೌರ್ಜನ್ಯ ಸ್ವಲ್ಪವಾದರೂ ನಿಯಂತ್ರಣಕ್ಕೆ ಬಂದೀತು ಎಂದು ಸಾಜಿದಾ ಅಭಿಪ್ರಾಯಪಟ್ಟರು.
ಮಹಿಳೆಯರ ಮೇಲಿನ ದೌರ್ಜನ್ಯ ಈಗ ಒಂದು ವೈರಸ್ ನಂತೆ ಹರಡಿಕೊಳ್ಳುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ಇತರ ಸಮಾಜಕ್ಕೆ ಸೂಕ್ತ ಅರಿವು ಇದನ್ನು ಸ್ವಲ್ಪಮಟ್ಟಿಗಾದರೂ ತಡೆಯಬಹುದು ಎಂದು ಸಾಜಿದಾ ತಿಳಿಸಿದರು.
ಮೊಬೈಲ್ ಫೋನ್ ಇಲ್ಲದೇ ಜೀವನವೇ ಇಲ್ಲ ಎನ್ನುವಷ್ಟು ಜನ ಅದಕ್ಕೆ ವ್ಯಸನರಾಗಿದ್ದಾರೆ. ಅದು ಈಗಿನ ಜೀವನಕ್ಕೆ ಎಷ್ಟು ಅನುಕೂಲವೊ ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಅದರಲ್ಲಿರುವ ಅಶ್ಲೀಲ ವಿಡಿಯೋಗಳು ಯುವ ಜನತೆಯನ್ನು ಪಾಪದ ಜೀವನಕ್ಕೆ ದೂಡಿದೆ. ಚಿಕ್ಕ ವಯಸ್ಸಿನ ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಇದೊಂದು ಮುಖ್ಯ ಕಾರಣ. ಪಾಲಕರಿಗೂ ಈ ವಿಷಯ ಗೊತ್ತಿದ್ದರೂ ಅಸಹಾಯಕರಾಗಿದ್ದಾರೆ. ಈ ವಿಷಯದಲ್ಲಿ ಚಿಕ್ಕ ಹುಡುಗಿಯರಿಗೆ, ಯುವತಿಯರಿಗೆ ಸಲಹೆ ಅಗತ್ಯವಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಜಮಾತ ಸಂಸ್ಥೆ ಸೆಪ್ಟೆಂಬರ್ ತಿಂಗಳಿಡೀ ಅಭಿಯಾನ ಏರ್ಪಡಿಸಿದೆ ಎಂದರು.
ಅಭಿಯಾನದಲ್ಲಿ ನೈತಿಕ ಜೀವನದ ಶಾಂತಿ ನೆಮ್ಮದಿ ಕುರಿತೂ ಮಾಹಿತಿ ನೀಡಲಾಗುವುದು ಎಂದೂ ಸಾಜಿದಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಘಟಕದ ಪದಾಧಿಕಾರಿಗಳಾದ ಶಗುಫ್ತಾ ಲಾಡಜಿ, ಹಲಿಮಾ ನದಾಫ ಮತ್ತು ಶಾಯಿಸ್ತಾ ಪಠಾಣ ಇದ್ದರು.