ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಣಮಳೆಯಾಗುತ್ತಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯುಂತಾಗಿದೆ. ಭಾರಿ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ 17ಕ್ಕೂ ಸೇತುವೆಗಳು ಮುಳುಗಡೆಯಾಗಿವೆ.
ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಿಡಕಲ್ ಜಲಾಶಯ ತುಂಬಿ ಹರಿಯುತ್ತಿದೆ. ಪರಿಣಾಮ ಜಲಾಶಯದಿಂದ 27,000 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಬಿಡಲಾಗಿದ್ದು, ಗೋಕಾಕ್, ನಿಪ್ಪಾಣಿ ಸೇರಿದಂತೆ ಬೆಳಗಾವಿಯ ಹಲವೆಡೆಗಳಲ್ಲಿ ಪ್ರವಾಹವುಂಟಾಗಿದೆ.
ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಮಾರ್ಕೆಟ್ ಗಳು ಮುಳುಗಡೆಯಾಗಿದ್ದು, ಉಪ್ಪಾರ ಓಣಿ, ಹಳೆ ದನದ ಪೇಟೆ ಹಾಗೂ ತಾಲೂಕಿನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.
ಜಿಲ್ಲೆಯಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ಸೇತುವೆಗಳಾದ ಗೊಕಾಕ್-ಸಿಂಗಾಪುರ, ಗೊಕಾಕ್ -ಚಿಗಡೊಳ್ಳಿ, ಮುಡಲಗಿ-ಸುಣದೊಳ್ಳಿ, ಕಮಲದಿನಿ-ಹುಣಶಾಡ, ಕುಲಗೊಡ-ಔರಾದಿ, ಡವಳೇಶ್ವರ-ಮಾಹಾಲಿಂಗಪುರ, ಸಿಂಗಳಾಪುರ-ಹುಕ್ಕೇರಿ, ಹುಕ್ಕೇರಿ-ನೋಗಿನಾಳ, ಅರ್ಜುನವಾಡ-ಕುರಣಿ, ಸಂಕೇಶ್ವರ-ಯಲ್ಮರಡಿ-ಕುರಣಿ, ಸದಲಗಾ-ಬಜವಾಡಿ-ನಿಪ್ಪಾಣಿ, ಬೋಜ-ಕಾರಜಗ, ಸಿದ್ನಾಳ-ಅಕ್ಕೋಳ, ಭೀವಶಿ-ಜತ್ರಾಟ ಸೇರಿದಂತೆ 17ಕ್ಕೂ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ.