ಖಾನಾಪುರ, ೨೭- : ಮುಂಗಾರು ಮಳೆ ನಿಧಾನವಾಗಿ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿದ್ದಂತೆ ನದಿಗಳಿಂದ ಅಕ್ರಮವಾಗಿ ಮರಳು ಎತ್ತುವ ಕಾರ್ಯ ನಡೆದಿದ್ದು ಖಾನಾಪುರ ತಾಲೂಕಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಭಾರಿ ಪ್ರಮಾಣದ ಮರಳು ಜಫ್ತು ಮಾಡಲಾಗಿದೆ.
ಕಳೆದ ವಾರ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ಬಳಿ ಮಲಪ್ರಭಾ ನದಿಯಿಂದ ಅಕ್ರಮವಾಗಿ ಸುಮಾರು 600 ಟ್ರಕ್ ಲೋಡ್ ಮರಳನ್ನು ಗಣಿಗಾರಿಕೆ ಮಾಡಿ ನದಿಯಿಂದ ಸ್ವಲ್ಪ ದೂರದಲ್ಲಿ ಬಚ್ಚಿಡಲಾಗಿತ್ತು. ಈ ಕುರಿತು ಮಾಹಿತಿ ದೊರೆತ ನಂತರ ಖಾನಾಪುರ ತಹಸೀಲ್ದಾರ ಪ್ರಕಾಶ ಗಾಯಕ್ವಾಡ ನೇತೃತ್ವದ ಕಂದಾಯ ಇಲಾಖೆಯ ತಂಡ ದಾಳಿ ಮಾಡಿ ಬಚಿಟ್ಟ ಮರಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮರಳನ್ನು ಪಿಡಬ್ಲುಡಿ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಖಾನಾಪುರ ತಹಶೀಲದಾರರು ತಿಳಿಸಿದ್ದಾರೆ.
ಈ ಕುರಿತು ತಹಶೀಲ್ದಾರ ಗಾಯಕ್ವಾಡ ಅವರು ಸಮದರ್ಶಿಗೆ ಮಾಹಿತಿ ನೀಡಿದ್ದು ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಯ ಮೇಲೆ ಕಣ್ಣಿಡಲಾಗಿದೆ. ತಾಲೂಕಿನ ಯಾವ ಭಾಗದಲ್ಲಿ ಈ ಅಕ್ರಮ ಮರಳುಗಾರಿಕೆ ನಡೆದಿಲ್ಲ ಎಂದು ಅವರು ತಿಳಿಸಿದರು.