ಬೆಳಗಾವಿ : ನಗರದಲ್ಲಿ ಚಿರತೆ ಹಿಡಿಯಲು ನಡೆದಿರುವ ಕಾರ್ಯಾಚರಣೆ ಸ್ಥಳಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಸೋಮವಾರ ಭೇಟಿ ನೀಡಿ ಕಾರ್ಯಾಚರಣೆಯ ಮಾಹಿತಿ ಪಡೆದರು. ಈ ಮೂಲಕ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಮೊದಲ ರಾಜಕಾರಣಿಯಾಗಿದ್ದಾರೆ.
ಬೆಳಗಾವಿಯಲ್ಲಿ ಚಿರತೆ ಪತ್ತೆಯಾಗಿ ಸೋಮವಾರಕ್ಕೆ 24 ದಿನಗಳಾದವು. ಗಾಲ್ಫ ಕೋರ್ಸ್ ಮೈದಾನದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಆರಂಭಗೊಂಡು 22 ದಿನಗಳಾಗಿವೆ. ಆದರೆ ಯಾವೊಬ್ಬ ರಾಜಕಾರಣಿಯೂ ಅಲ್ಲಿಗೆ ಹೋಗಿರಲಿಲ್ಲ. ಜಿಲ್ಲೆಯವರೇ ಆದ ಅರಣ್ಯ ಸಚಿವ ಉಮೇಶ ಕತ್ತಿಯವರೇ ನನಗೆ ಚಿರತೆ ಕಂಡರೆ ಭಯ, ಅದಕ್ಕೆ ಗಾಲ್ಫ ಕೋರ್ಸಗೆ ಹೋಗಲ್ಲ ಎಂಬ ಹೇಳಿಕೆ ನೀಡಿದ್ದರು.
ಗಾಲ್ಫ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಾಡಿ ಅವರು, ಅರಣ್ಯಾಧಿಕಾರಿಗಳ ಜತೆಗೆ ಚರ್ಚಿಸಿ ಕಾರ್ಯಾಚರಣೆ ಕುರಿತು ವಿವರ ಪಡೆದರು. ನಂತರ ಗಾಲ್ಫ ಕೋರ್ಸನಲ್ಲಿ ನಡೆಯುತ್ತಾ ಒಂದು ಸುತ್ತು ಹಾಕಿ ಚಿರತೆ ಸೆರೆಗೆ ಇಟ್ಟ ಬೋನ್, ಅಳವಡಿಸಿರುವ ಕ್ಯಾಮೆರಾಗಳನ್ನು ಪರಿಶೀಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿರತೆ ಹಿಡಿಯುವಲ್ಲಿ ಸರ್ಕಾರ ಯಾವುದೇ ರೀತಿ ವಿಫಲ ಆಗಿಲ್ಲ. ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಅರಣ್ಯ, ಕಂದಾಯ, ಪೊಲೀಸ್ ಇಲಾಖೆ ಸಮನ್ವಯಕ್ಕೆ ಸಮಿತಿ ರಚಿಸಲು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚಿಸುವುದಾಗಿ ತಿಳಿಸಿದರು.