ಬೆಳಗಾವಿ : ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಯುವಕರ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ ಯುವಕನೋರ್ವ ಕೊಲೆಯಾದ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಎಂಬ ಚಿಕ್ಕ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದು ಹಿಂದಿನ ದ್ವೇಷವೇ ಕೊಲೆಗೆ ಕಾರಣವಾಗಿರಬಹುದೆನ್ನಲಾಗಿದೆ.
ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಸಾರ್ವಜನಿಕ ಮೂರ್ತಿಯನ್ನು ಗ್ರಾಮದ ಹೊರವಲಯದ ಕೆರೆಯಲ್ಲಿ ವಿಸರ್ಜಿಸಲು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮದ ಮೂರು ನಾಲ್ಕು ಯುವಕರು ಗ್ರಾಮದವರೇ ಆದ ಅರ್ಜುನಗೌಡ ಪಾಟೀಲ ಎಂಬವರೊಂದಿಗೆ ಜಗಳ ಆಗಿದೆ. ಅಷ್ಟರಲ್ಲಿ ಅರ್ಜುನಗೌಡರ ಪರ ಒಂದಿಬ್ಬರು ನಿಂತಿದ್ದಾರೆ. ಉಭಯರ ಮಧ್ಯೆ ವಾಗ್ವಾದವಾಗಿದೆ. ಅಷ್ಟರಲ್ಲಿ ಓರ್ವ ತಾನು ಸೊಂಟದಲ್ಲಿ ಅಡಗಿಸಿಟ್ಟುಕೊಂಡಿದ್ದ ಚಾಕೂ ತೆಗೆದು ಅರ್ಜುನಗೌಡರ ಎದೆಗೆ ಇರಿದಿದ್ದಾನೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಇರಿದವರು ಪರಾರಿಯಾಗಿದ್ದಾರೆ.
ಮೂರ್ತಿಯ ವಿಸರ್ಜನೆಯ ಬಂದೋಬಸ್ತಿಗಿದ್ದ ಇಬ್ಬರು ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸ್ ಠಾಣೆಗೆ ಮಾಹಿತಿ ರವಾಣಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಜುನಗೌಡ ಅವರನ್ನು ಆಂಬುಲೆನ್ಸ್ ನಲ್ಲಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಸೇರಿಸಿದರು.
ಗ್ರಾಮಕ್ಕೆ ಧಾವಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳೀಯರ ಮಾಹಿತಿ ಪಡೆದು ಘಟನೆ ನಡೆದ ಎರಡೇ ತಾಸಿನಲ್ಲಿ ಹಂತಕರನ್ನು ಬಂಧಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಿಂದ ದೊರೆತ ಮಾಹಿತಿಯಂತೆ :
ಹಂತಕರು ಮತ್ತು ಕೊಲೆಯಾದ ಅರ್ಜುನಗೌಡ ಸ್ನೇಹಿತರು. ಆದರೆ ಯಾವುದೋ ಕಾರಣಕ್ಕೆ, ಬಹುಷಃ ಹುಡುಗಿಯ ಕಾರಣಕ್ಕೆ ಅವರಲ್ಲಿ ಭಿನ್ನಾಭಿಪ್ರಾಯ ಬಂದಿದೆ ಎನ್ನಲಾಗಿದೆ. ಅದಕ್ಕೇ ಪೂರ್ವ ನಿಯೋಜಿಸಿದಂತೆ ಜಗಳವಾಡಿ ಹತ್ಯೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಯರಗಟ್ಟಿ ಪೊಲೀಸರು – 21 ವರುಷದ ಉದಯ ಬಂದ್ರೊಳ್ಳಿ, 21 ವರುಷದ ಸುಭಾಷ ಸೊಲ್ಲಣ್ಣವರ, 20 ವರುಷದ ವಿಠ್ಠಲ ಮೀಸಿ ಮತ್ತು ಓರ್ವ ಅಪ್ರಾಪ್ತ ವಯಸ್ಸಿನ ವ್ಯಕ್ತಿಯನ್ನು ಬಂಧಿಸಿದ್ದಾರೆ.