ಮಂಡ್ಯ : ಮಕರ ಸಂಕ್ರಾಂತಿ ದಿನ ಸಹ ಮನೆಗೆ ಹೋಗಿ ಹಬ್ಬ ಮಾಡದೇ ಧರಣಿ ಮುಂದುವರಿಸಿದ್ದ ರೈತರ ಬಳಿ ಬಂದ ಮುಸ್ಲಿಂ ಸಮಾಜದವರು ‘ನೀವು ಮನೆಗೆ ಹೋಗಿ ಹಬ್ಬ ಮಾಡಿ, ಇಲ್ಲಿ ನಾವು ಹೋರಾಟ ಮಾಡುತ್ತೇವೆ’ ಎಂದು ರೈತರ ಪರ ಧರಣಿಯನ್ನು ಮುಂದುವರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 72 ದಿನಗಳಿಂದ ಮಂಡ್ಯದ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ದಿನವೂ ರೈತರು ತಮ್ಮ ಧರಣಿಯನ್ನು ಮುಂದುವರಿಸಿದ್ದರು. “ರೈತರ ಹಬ್ಬ ಸಂಕ್ರಾಂತಿ” ದಿನವೂ ಹಿಂದೂ ರೈತರು ಧರಣಿ ಕುಳಿತಿರುವುದನ್ನು ಕಂಡು ಮುಸ್ಲಿಮರು ‘ಈ ದಿನ ಹಬ್ಬ, ನೀವು ಮನೆಗೆ ತೆರಳಿ ಹಬ್ಬ ಮಾಡಿ, ನಾವು ಇಲ್ಲಿ ಕುಳಿತುಕೊಳ್ಳುತ್ತೇವೆ. ನೀವು ಮನೆಗೆ ಹೋಗಿ ಹಬ್ಬ ಆಚರಿಸಿ’ ಎಂದು ತಾವು ಹೋರಾಟ ಮುಂದುವರಿಸಿದರು.
ಈ ಬಗ್ಗೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಚಂದನ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿದ್ದಾರೆ. ”ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲವು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಲಾಭಕ್ಕೋಸ್ಕರ ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತವೆ. ಆದರೆ, ರೈತನ ಹೋರಾಟಕ್ಕೆ ಹೆಗಲು ಕೊಟ್ಟ ಮುಸಲ್ಮಾನರ ಈ ನಿಲುವು ಇಡೀ ದೇಶಕ್ಕೆ ಮಾದರಿಯಾಗಿದೆ” ಎಂದರು.
“ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಟ್ಟು, ತಮ್ಮ ಬೇಳೆ ಬೇಯಿಸಿಕೊಂಡು ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಕೆಲ ರಾಜಕೀಯ ಪಕ್ಷಗಳಿಗೆ ಮುಸಲ್ಮಾನರ ಈ ಧರ್ಮಾತೀತ, ಜಾತ್ಯತೀತ ನಡೆ ತಕ್ಕ ಉತ್ತರ ನೀಡಿದೆ” ಎಂದು ರೈತ ಮುಖಂಡರೊಬ್ಬರು ಹೇಳಿದರು.