ಹೊಸದಿಲ್ಲಿ, ೯- ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರದಂದು ಹೊರ ಬಿದ್ದಿದ್ದು, ಗುಜರಾತಿನಲ್ಲಿ ಮತ್ತೆ ಬಿಜೆಪಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. ಗುಜರಾತಿನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದ ಆಮ್ ಆದ್ಮಿ ಪಾರ್ಟಿ ಕೇವಲ ಐದು ಸ್ಥಾನಗಳಲ್ಲಿ ಗೆದ್ದಿದ್ದು, ಇದರ ಮಧ್ಯೆಯೂ ಮಹತ್ತರ ಸಾಧನೆ ಮಾಡಿದೆ.
ಆಮ್ ಆದ್ಮಿ ಪಾರ್ಟಿ ಅಸ್ತಿತ್ವಕ್ಕೆ ಬಂದ ಕೇವಲ 10 ವರ್ಷಗಳಲ್ಲಿ ಈಗ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಳ್ಳಲಿದ್ದು, ಸೋಲಿನ ನಡುವೆಯೂ ಅರವಿಂದ ಕೇಜ್ರಿವಾಲ್ ಅವರ ಪಕ್ಷಕ್ಕೆ ಖುಷಿ ಸಿಕ್ಕಿದೆ. ಆಮ್ ಆದ್ಮಿ ಪಾರ್ಟಿ ಈಗಾಗಲೇ ದೆಹಲಿ ಹಾಗೂ ಪಂಜಾಬನಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತಿದ್ದು, ಗೋವಾದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ.
ಇದೀಗ ಗುಜರಾತಿನಲ್ಲಿ ಐವರು ಶಾಸಕರಾಗಿ ಆಯ್ಕೆಯಾಗಿದ್ದು, ಯಾವುದೇ ಒಂದು ಪಕ್ಷ ರಾಷ್ಟ್ರೀಯ ಸ್ಥಾನಮಾನ ಪಡೆಯಬೇಕಾದರೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ತಲಾ ಶೇಕಡ 6ಕ್ಕಿಂತ ಅಧಿಕ ಮತ ಅಥವಾ ತಲಾ ಎರಡು ಶಾಸಕರನ್ನು ಹೊಂದಿರಬೇಕಾಗುತ್ತದೆ. ಇದೀಗ ಗುಜರಾತ್ ಗೆಲುವಿನೊಂದಿಗೆ ಈ ಮಾನದಂಡವನ್ನು ಆಮ್ ಆದ್ಮಿ ಪಕ್ಷ ಈಗ ಪೂರೈಸಿರುವ ಕಾರಣ ಇದೀಗ ಅದಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗಲಿದೆ.