ಗೋಕಾಕ, 5- : ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯಲ್ಲೂ ಸಹ ವರುಣನ ಅಬ್ಬರಕ್ಕೆ ಜೋರಾಗಿದೆ. ನಿರಂತರವಾಗಿ ಸುರಿದ ಧಾರಾಕಾರದ ಮಳೆಯಿಂದ ಗೋಕಾಕ ತಾಲೂಕಿನ ಕೊಣ್ಣೂರ ಸಮೀಪ ಇರುವ ಮಾಣಿಕವಾಡಿ ಗ್ರಾಮದ ಜನರು ಹಿಂದೆಂದೂ ಕಂಡಿರದಂಥ ಪ್ರವಾಹದಿಂದ ಪರದಾಡುವಂತಾಯಿತು.
ಕೊಣ್ಣೂರ ಸುತ್ತ ಮುತ್ತ ಒಂದು ತಾಸು ಸುರಿದ ದೈತ್ಯ ಮಳೆಯಿಂದ ಸಾಗರದಂತೆ ನೀರು ಗ್ರಾಮದ ಮನೆ ಮನೆಗಳಲ್ಲಿ ನುಗ್ಗಿತು.
ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಮನೆಯಿಂದ ಮಳೆ ನೀರು ಹೊರಹಾಕಲು ಗ್ರಾಮಸ್ಥರು ಹರಸಾಹಸ ಪಟ್ಟರು. ಮಳೆಗೆ ರಸ್ತೆಗಳು ನದಿಯ ಸ್ವರೂಪ ಪಡೆದುಕೊಂಡಿದ್ದವು. ಬೈಕ್, ಕಾರು ದಾಟಿಸಲಿಕ್ಕೆ ಜನ ಪರದಾಡಿದರು.
ಅಕಾಲಿಕ ಮಳೆಯ ಅಬ್ಬರಕ್ಕೆ ಮಾಣಿಕವಾಡಿ ಜನ ಬೆಚ್ಚಿ ಬಿದ್ದಿದ್ದು, ಮಳೆ ನಿಂತರೂ ಸಹ ಇನ್ನೂ ನೀರಿನ ಹರಿವು ನಿರಂತರವಾಗಿ ಹರಿಯುತ್ತಿದೆ.
ಈ ನಡುವೆ ಮಳೆಯಿಂದ ಗುಡ್ಡದ ಮೇಲಿಂದ ದೊಡ್ಡ ಬಂಡೆ ಕುಸಿದು ಗೋಕಾಕ ಮತ್ತು ಫಾಲ್ಸ ರಸ್ತೆ ಸಂಚಾರಕ್ಕೆ ಅಡಚಣಿ ಉಂಟಾಗಿತ್ತು.