ಹುಬ್ಬಳ್ಳಿಯಲ್ಲೇ ನೇಹಾ ಮಾದರಿ ಮತ್ತೊಂದು ಘಟನೆ; ಯುವತಿಯ ಮನೆಗೆ ನುಗ್ಗಿ ಕೊಲೆ ಮಾಡಿದ ಪ್ರೇಮಿ

A B Dharwadkar
ಹುಬ್ಬಳ್ಳಿಯಲ್ಲೇ ನೇಹಾ ಮಾದರಿ ಮತ್ತೊಂದು ಘಟನೆ; ಯುವತಿಯ ಮನೆಗೆ ನುಗ್ಗಿ ಕೊಲೆ ಮಾಡಿದ ಪ್ರೇಮಿ

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಯೊಬ್ಬ ಅನಾಥ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಲ್ಲಿನ ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ವೀರಾಪುರ ಓಣಿಯ 21 ವರ್ಷದ ಅಂಜಲಿ ಮೋಹನ ಅಂಬಿಗೇರ ಎಂಬವಳು ಕೊಲೆಯಾದ ದುರ್ದೈವಿಯಾಗಿದ್ದು ಯಲ್ಲಾಪುರ ಓಣಿಯ ಗಿರೀಶ (ವಿಶ್ವ) ಎಸ್. ಸಾವಂತ ಎಂಬವನು ಈ ದುಷ್ಕ್ರತ್ಯ ಎಸಗಿದ್ದಾನೆ.

ತಂದೆ ತಾಯಿ ಇಲ್ಲದ ಅಂಜಲಿ ಎಂಬಾಕೆ ಸಹೋದರಿ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಅನಾಥ ಅಂಜಲಿಯನ್ನು  ಗಿರೀಶ ಎಂಬಾತ ಪ್ರೀತಿಸುತ್ತಿದ್ದ. ಆದರೆ ಆಕೆ ಪ್ರೀತಿಗೆ ನಿರಾಕರಿಸಿದ್ದಾಳೆ. ಇದಕ್ಕೆ ಸೇಡು ತೀರಿಸಿಕೊಳ್ಳಲು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆಯ ಬಾಗಿಲು ತಟ್ಟಿದ್ದಾನೆ. ಅಂಜಲಿಯೇ ಬಾಗಿಲು ತೆರೆದಾಗ ಚಾಕುವಿನಿಂದ ಮನಬಂದಂತೆ ಆಕೆಗೆ ಇರಿದಿದ್ದಾನೆ. ಆಗ ಅಂಜಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಕೃತ್ಯ ಎಸಗಿದ ಗಿರೀಶ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದಕ್ಕೂ ಮುನ್ನ ಆರೋಪಿ ಗಿರೀಶನು ಅಂಜಲಿಗೆ ಮೈಸೂರಿಗೆ ಬರುವಂತೆ ಹೇಳಿದ್ದ. ಒಂದು ವೇಳೆ ನೀನು ನನ್ನ ಜೊತೆ ಬರದಿದ್ದರೆ ನಿರಂಜನ ಹಿರೇಮಠ ಮಗಳು ನೇಹಾಳಿಗೆ ಆದ ಹಾಗೇಯೇ ನಿನಗೂ ಮಾಡುತ್ತೇನೆ ಎಂದು ಬೆದರಿಸಿದ್ದ. ವಿಶ್ವ ಎಂಬಾತ ತನ್ನ ಮೊಮ್ಮಗಳು ಅಂಜಲಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಅಜ್ಜಿ ಗಂಗಮ್ಮ ಈ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಿದ್ದರು. ಅಜ್ಜಿಯ ಮಾತನ್ನು ಅಷ್ಟು ಗಂಭೀರವಾಗಿ ಪರಿಗಣಿಸದ ಪೊಲೀಸರು ಇದೆಲ್ಲ ಭ್ರಮೆ ಎಂದು ಹೇಳಿ ಅಜ್ಜಿಯನ್ನು ಕಳುಹಿಸಿದ್ದರು.

ಸದ್ಯ ಆರೋಪಿ ಗಿರೀಶ (ವಿಶ್ವ) ತಲೆಮರೆಸಿಕೊಂಡಿದ್ದಾನೆ. ಗಿರೀಶನ ಮೇಲೆ ಬೈಕ್ ಕದ್ದ ಸೇರಿದಂತೆ ಹಲವು ಇತರ ಪ್ರಕರಣಗಳಿವೆ ಎನ್ನಲಾಗಿದೆ.

ಕ್ರೌರ್ಯದ ಪರಮಾವಧಿ

ಮನೆಗೆ ನುಗ್ಗಿದ ದುಷ್ಕರ್ಮಿ ವಿಶ್ವನು ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದಳೆಂದು ಖಚಿತವಾದ ಬಳಿಕವೇ ಅಲ್ಲಿಂದ ಓಡಿ ಹೋಗಿದ್ದಾನೆ.

ಗಿರೀಶನ ತಾಯಿ ಮನೆ ಮನೆಯ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ, ವಿದ್ಯಾರ್ಥಿನಿ ನೇಹಾಳನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಎಪ್ರಿಲ್ 18ರಂದು ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಘಟನೆ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿತ್ತು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.