ಹೊಸದಿಲ್ಲಿ, ಜುಲೈ 1: ಮೂರು ಹೊಸ ಕ್ರಿಮಿನಲ್ ಅಪರಾಧ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬಂದಿದ್ದು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಡಪಾಯಿ ಬೀದಿ ಬದಿ ವ್ಯಾಪಾರಿಯ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಗಿದೆ.
ದೆಹಲಿಯ ರೈಲು ನಿಲ್ದಾಣದ ಫುಟ್ ಓವರ್ ಬ್ರಿಜ್ ಅಡಿ ಬೀದಿ ಬದಿ ವ್ಯಾಪಾರ ಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 285ರ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ ಪ್ರಕಾರ ಆರೋಪಿಯನ್ನು ಬಿಹಾರದ ಬರ್ಹ ಪ್ರದೇಶದ ನಿವಾಸಿ ಪಂಕಜ ಕುಮಾರ ಎಂದು ಹೇಳಲಾಗಿದೆ.
ಬೀದಿ ಬದಿ ವ್ಯಾಪಾರಿ ಮೇಲೆ ದೂರು ದಾಖಲಿಸಿರುವುದು ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಇದು ನಿಮ್ಮ ನೂತನ ಕಾನೂನಿನ ಸಾಧನೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ನಿಮಗೆ ಬೀದಿ ಬದಿ ವ್ಯಾಪಾರಿಯೇ ಮೊದಲು ಸಿಕ್ಕಿದ್ದೆ ಎಂದು ಕೇಳಿದ್ದಾರೆ.
ಮೂರು ಹೊಸ ಕ್ರಿಮಿನಲ್ ಕಾನೂನುಗಳು :
ಹಿಂದಿನ ಇಂಡಿಯನ್ ಪೀನಲ್ ಕೋಡ್ (ಐಪಿಸಿ) 511 ಸೆಕ್ಷನ್ಗಳನ್ನು ಹೊಂದಿದೆ. ಆದರೆ ನೂತನ ಕಾನೂನು ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ಗಳನ್ನು ಹೊಂದಿದೆ. ಸಂಹಿತೆಯಲ್ಲಿ ಒಟ್ಟು 20 ಹೊಸ ಅಪರಾಧಗಳು ಸೇರ್ಪಡೆಯಾಗಿದ್ದು, 33 ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗಿದೆ.
83 ಅಪರಾಧಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. 23 ಅಪರಾಧಗಳಲ್ಲಿ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಪರಿಚಯಿಸಲಾಗಿದೆ. ಆರು ಅಪರಾಧಗಳಲ್ಲಿ ಸಮುದಾಯ ಸೇವೆಯ ದಂಡವನ್ನು ಪರಿಚಯಿಸಲಾಗಿದೆ. ಕಾಯಿದೆಯಲ್ಲಿ 19 ವಿಭಾಗಗಳನ್ನು ರದ್ದುಗೊಳಿಸಲಾಗಿದೆ ಅಥವಾ ತೆಗೆದು ಹಾಕಲಾಗಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) 484 ಸೆಕ್ಷನ್ಗಳನ್ನು ಹೊಂದಿದೆ. ಆದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ಗಳನ್ನು ಹೊಂದಿದೆ. ಸಂಹಿತೆಯಲ್ಲಿ ಒಟ್ಟು 177 ನಿಬಂಧನೆಗಳನ್ನು ಬದಲಾಯಿಸಲಾಗಿದೆ. ಒಂಭತ್ತು ಹೊಸ ಸೆಕ್ಷನ್ಗಳು ಮತ್ತು 39 ಹೊಸ ಸಬ್ ಸೆಕ್ಷನ್ಗಳನ್ನು ಸೇರಿಸಲಾಗಿದೆ.
44 ಹೊಸ ನಿಬಂಧನೆಗಳು ಮತ್ತು ಸ್ಪಷ್ಟೀಕರಣಗಳನ್ನು ಸೇರಿಸಲಾಗಿದೆ. 35 ಸೆಕ್ಷನ್ಗಳಿಗೆ ಟೈಮ್ಲೈನ್ಗಳನ್ನು ಸೇರಿಸಲಾಗಿದೆ. ಸಂಹಿತೆಯಲ್ಲಿ ಒಟ್ಟು 14 ವಿಭಾಗಗಳನ್ನು ರದ್ದುಪಡಿಸಲಾಗಿದೆ ಮತ್ತು ತೆಗೆದುಹಾಕಲಾಗಿದೆ.
ಭಾರತೀಯ ಸಾಕ್ಷ್ಯ ಕಾಯಿದೆಯಲ್ಲಿ 167 ನಿಬಂಧನೆಗಳು ಇರುತ್ತದೆ. ಅದರ ಬದಲಾಗಿ ಭಾರತೀಯ ಸಾಕ್ಷ್ಯ ಅಧಿನಿಯಮ 170 ನಿಬಂಧನೆಗಳನ್ನು ಹೊಂದಿರುತ್ತದೆ. ಒಟ್ಟು 24 ನಿಬಂಧನೆಗಳನ್ನು ಬದಲಾಯಿಸಲಾಗಿದೆ. ಎರಡು ಹೊಸ ನಿಬಂಧನೆಗಳು ಮತ್ತು ಆರು ಉಪ-ನಿಬಂಧನೆಗಳನ್ನು ಸೇರಿಸಲಾಗಿದೆ. ಆರು ನಿಬಂಧನೆಗಳನ್ನು ಅಧಿನಿಯಮದಲ್ಲಿ ರದ್ದುಗೊಳಿಸಲಾಗಿದೆ ಅಥವಾ ಅಳಿಸಲಾಗಿದೆ.