ಬೆಂಗಳೂರು, ಸೆ. 16 : ₹2 ಸಾವಿರಕ್ಕಿಂತ ಹೆಚ್ಚಿನ ನಿರ್ದಿಷ್ಟ ಯುಪಿಐ ವ್ಯಾಪಾರಿ ವಹಿವಾಟುಗಳಿಗೆ ಎಂಡಿಆರ್ ವಿಧಿಸುವ ಕೇಂದ್ರದ ನಿರ್ಧಾರವನ್ನು ಸಚಿವ ಶಿವರಾಜ ತಂಗಡಗಿ ತೀವ್ರವಾಗಿ ಟೀಕಿಸಿದ್ದು, ‘ಮೋದಿ ಟ್ಯಾಕ್ಸ್’ ಮೂಲಕ ಕೇಂದ್ರ ಸರ್ಕಾರ ಜನರ ಜೇಬಿನ ಮೇಲೆ ಮತ್ತೊಮ್ಮೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿರುದ್ಯೋಗ, ಹಣದುಬ್ಬರ ಮತ್ತು ಆದಾಯ ಕೊರತೆಯಿಂದ ಜನರು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಶುಲ್ಕಗಳನ್ನು ವಿಧಿಸುವುದು ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹಾಕಿದಂತಾಗುತ್ತದೆ ಎಂದು ತಂಗಡಗಿ ಹೇಳಿದ್ದಾರೆ.
‘ಗ್ರಾಹಕರಿಗೆ ಯುಪಿಐ ಉಚಿತವಾಗಿರುತ್ತದೆ, ವ್ಯಾಪಾರಿಗಳಿಗೆ ಮಾತ್ರ ಎಂಡಿಆರ್ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವ್ಯಾಪಾರಿಗಳ ಮೇಲೆ ಬೀಳುವ ಹೆಚ್ಚುವರಿ ವೆಚ್ಚ ಅಂತಿಮವಾಗಿ ಗ್ರಾಹಕರ ಮೇಲೆಯೇ ವರ್ಗಾವಣೆಯಾಗುವ ಸಾಧ್ಯತೆ ಇದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.