ಲಾಸ್ ಏಂಜಲೀಸ್, ಜೂನ್ 13 : ಫೋಲರಿನ್ ಬಾಲೋಗುನ್ ಅವರ ಎರಡು ಗೋಲುಗಳ ನೆರವಿನಿಂದ ಮೌರಿಸಿಯೊ ಪೊಚೆಟ್ಟಿನೊ ಮಾರ್ಗದರ್ಶನದ ಅಮೆರಿಕ ತಂಡ, ಪೆರುಗ್ವೆ ವಿರುದ್ಧ 4-1 ಗೋಲುಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಈ ಗೆಲುವಿನೊಂದಿಗೆ ಅಮೆರಿಕ ತಂಡ ಡಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದ ಆರಂಭದಲ್ಲೇ ಪೆರುಗ್ವೆ ಆಕ್ರಮಣಕಾರಿ ಆಟ ಪ್ರದರ್ಶಿಸಿದರೂ, 7ನೇ ನಿಮಿಷದಲ್ಲಿ ವೆಸ್ಟನ್ ಮೆಕೆನ್ನಿ ನೀಡಿದ ಪಾಸ್ ತಡೆಯುವ ಯತ್ನದಲ್ಲಿ ಪೆರುಗ್ವೆಯ ಡಾಮಿಯನ್ ಬೊಬಾಡಿಲ್ಲಾ ಆಕಸ್ಮಿಕವಾಗಿ ಆತ್ಮಘಾತಿ ಗೋಲು ದಾಖಲಿಸಿದರು. ಇದರಿಂದ ಅಮೆರಿಕ ತಂಡ 1-0 ಮುನ್ನಡೆ ಸಾಧಿಸಿತು.
ನಂತರ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಅಮೆರಿಕ ಪರ 31ನೇ ನಿಮಿಷದಲ್ಲಿ ಬಾಲೋಗುನ್ ಎರಡನೇ ಗೋಲು ಗಳಿಸಿದರು. ಮೊದಲಾರ್ಧದ ಇಂಜುರಿ ಸಮಯದ 45+5ನೇ ನಿಮಿಷದಲ್ಲಿ ಮಲಿಕ್ ಟಿಲ್ಮನ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಬಾಲೋಗುನ್, ತಮ್ಮ ಎರಡನೇ ಹಾಗೂ ತಂಡದ ಮೂರನೇ ಗೋಲು ದಾಖಲಿಸಿದರು.
ದ್ವಿತೀಯಾರ್ಧದಲ್ಲಿ ಹಿನ್ನಡೆಯಿಂದ ಹೊರಬರಲು ಪೆರುಗ್ವೆ ಪ್ರಯತ್ನ ನಡೆಸಿತು. 73ನೇ ನಿಮಿಷದಲ್ಲಿ ಜೂಲಿಯೊ ಎನ್ಸಿಸೊ ನೀಡಿದ ನಿಖರ ಪಾಸ್ ಅನ್ನು ಮೌರಿಸಿಯೊ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಏಕೈಕ ಸಮಾಧಾನದ ಗೋಲು ತಂದುಕೊಟ್ಟರು.
ಆದರೆ ಪಂದ್ಯದ ಅಂತಿಮ ಕ್ಷಣಗಳಲ್ಲಿ ಜಿಯೋ ರೇನಾ ದೂರದಿಂದ ಸಿಡಿಸಿದ ಅದ್ಭುತ ಗೋಲು ಅಮೆರಿಕದ ಗೆಲುವಿಗೆ ಮತ್ತಷ್ಟು ಮೆರುಗು ನೀಡಿತು. ಪಂದ್ಯದಲ್ಲಿ ಪೆರುಗ್ವೆ ಆಟಗಾರರು 5 ಹಳದಿ ಕಾರ್ಡ್‌ಗಳನ್ನು ಪಡೆದರೆ, ಅಮೆರಿಕ ತಂಡ 1 ಹಳದಿ ಕಾರ್ಡ್ ಪಡೆದಿತು.
ಡಿ ಗುಂಪಿನಲ್ಲಿ ಅಮೆರಿಕ, ಟರ್ಕಿ, ಆಸ್ಟ್ರೇಲಿಯಾ ಮತ್ತು ಪೆರುಗ್ವೆ ತಂಡಗಳಿವೆ. ಮುಂದಿನ ಪಂದ್ಯದಲ್ಲಿ ಅಮೆರಿಕ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.