ಹೊಸದಿಲ್ಲಿ, ಅ. 6: ಒಮಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮ ಧ್ವಜದ ‘ಎಂಟಿ ಆನ್ ಪೀಸ್’ ವಾಣಿಜ್ಯ ಹಡಗಿನ ಮೇಲೆ ಮಂಗಳವಾರ ಕ್ಷಿಪಣಿ ಮಾದರಿಯ ಪ್ರಕ್ಷೇಪಕ ದಾಳಿ ನಡೆದಿದ್ದು, 11 ಭಾರತೀಯರು ಸೇರಿದಂತೆ ಒಟ್ಟು 12 ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ದಾಳಿಗೆ ಯಾರು ಹೊಣೆ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ.
‘ಎಂಟಿ ಆನ್ ಪೀಸ್’ ಹಡಗಿನಲ್ಲಿ ಒಟ್ಟು 19 ಸಿಬ್ಬಂದಿ ಇದ್ದು, ಅವರಲ್ಲಿ 17 ಮಂದಿ ಭಾರತೀಯರು. ದಾಳಿಯಲ್ಲಿ 12 ಮಂದಿ ಗಾಯಗೊಂಡಿದ್ದು, ಅವರಲ್ಲಿ 11 ಮಂದಿ ಭಾರತೀಯರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ಒಮಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮ ಧ್ವಜದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸುತ್ತದೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು. ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸುರಕ್ಷಿತ ನೌಕಾಯಾನ ಹಾಗೂ ವಾಣಿಜ್ಯ ಚಟುವಟಿಕೆಗಳು ಆದಷ್ಟು ಬೇಗ ಪುನರಾರಂಭವಾಗಬೇಕು ಎಂದು ಭಾರತ ಒತ್ತಾಯಿಸಿದೆ.
ಒಮಾನ್ ಅಧಿಕಾರಿಗಳ ನೆರವಿನಿಂದ ಗಾಯಗೊಂಡ ಸಿಬ್ಬಂದಿಯನ್ನು ಹಡಗಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಒಮಾನ್‌ನ ಖಸಾಬ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದ ಒಮಾನ್ ಅಧಿಕಾರಿಗಳಿಗೆ ಭಾರತ ಕೃತಜ್ಞತೆ ಸಲ್ಲಿಸಿದೆ.