ಹಾವೇರಿ, ನ. 24: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಫಲ ದೊರೆತಿದೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರೂ. ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ.
ನಗರದ ದೇವಗಿರಿ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಸಭೆ, ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸುದೀರ್ಘ ಚರ್ಚೆ ಹಾಗೂ ಹಗ್ಗಜಗ್ಗಾಟದ ಬಳಿಕ ಮಂಗಳವಾರ ನಸುಕಿನ ಜಾವ 3.25ಕ್ಕೆ ಅಂತ್ಯಗೊಂಡಿತು. ಹಲವು ಸುತ್ತಿನ ಮಾತುಕತೆಗಳ ಬಳಿಕ ಅಂತಿಮವಾಗಿ ಕಬ್ಬಿನ ದರ ನಿಗದಿಪಡಿಸಲಾಯಿತು.
ಸಭೆಯ ಆರಂಭದಲ್ಲಿ ಪ್ರತಿ ಟನ್ ಕಬ್ಬಿಗೆ 3,600 ರೂ. ನೀಡಬೇಕೆಂದು ರೈತರು ಆಗ್ರಹಿಸಿದ್ದರು. ಕನಿಷ್ಠ 3,300 ರೂ. ನೀಡಲೇಬೇಕೆಂದು ರೈತ ಮುಖಂಡರು ಪಟ್ಟು ಹಿಡಿದಿದ್ದರು. ಆದರೆ, ಪ್ರತಿ ಟನ್ಗೆ 3,100 ರೂ.ಗಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಹಠ ಹಿಡಿದಿದ್ದರು.
ಉಭಯ ಕಡೆಯವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಸಚಿವರು ಹಾಗೂ ಜಿಲ್ಲಾಡಳಿತ ನಡೆಸಿದ ಹಲವು ಸುತ್ತಿನ ಮಾತುಕತೆಗಳ ಬಳಿಕ ಪ್ರತಿ ಟನ್ಗೆ 3,225 ರೂ. ನೀಡುವ ಒಪ್ಪಂದಕ್ಕೆ ಬರಲಾಯಿತು.
ಸಕ್ಕರೆ ಇಳುವರಿ ಪ್ರಮಾಣದ ಕುರಿತು ವಾದ
ಬೆಳಗಾವಿ ಭಾಗದಲ್ಲಿ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣ ಶೇ. 11ಕ್ಕಿಂತ ಹೆಚ್ಚಿದ್ದರೆ, ಹಾವೇರಿ ಜಿಲ್ಲೆಯಲ್ಲಿ ಶೇ. 9.44ರಷ್ಟಿದೆ ಎಂದು ಕಾರ್ಖಾನೆ ಮಾಲೀಕರು ಸಭೆಯಲ್ಲಿ ವಾದಿಸಿದರು. ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ಇರುವುದರಿಂದ ರೈತರು ಬೇಡಿಕೆಯಿಟ್ಟಷ್ಟು ದರ ನೀಡಲು ಸಾಧ್ಯವಿಲ್ಲ ಎಂದು ಮಾಲೀಕರು ಪ್ರತಿಪಾದಿಸಿದರು. ಈ ವಿಚಾರವಾಗಿಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡ ಚನ್ನಪ್ಪ ಪೂಜಾರಿ ಸೇರಿದಂತೆ 30ಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಿದ್ದರು.
ಮುಳ್ಳಿನ ಬೇಲಿ ಹಾಕಿ ರಸ್ತೆ ಬಂದ್
ಕಬ್ಬಿನ ದರ ಅಂತಿಮಗೊಳ್ಳುವವರೆಗೂ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಯಿಂದ ಹೊರಹೋಗಬಾರದು ಎಂದು ಪ್ರತಿಭಟನಾನಿರತ ರೈತರು ಪಟ್ಟು ಹಿಡಿದಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿ ಸಂಚಾರವನ್ನು ನಿರ್ಬಂಧಿಸಿದ್ದರು.
ರಾತ್ರಿಯಿಡೀ ಪ್ರತಿಭಟನೆ ಮುಂದುವರಿಸಿದ ರೈತರು, ಕಬ್ಬಿನ ದರ ನಿಗದಿಪಡಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂಬ ನಿಲುವಿಗೆ ಬದ್ಧರಾಗಿದ್ದರು.
ರೈತರ ಬಿಗಿಪಟ್ಟು, ಕಾರ್ಖಾನೆ ಮಾಲೀಕರ ವಾದ ಹಾಗೂ ಜಿಲ್ಲಾಡಳಿತದ ಸುದೀರ್ಘ ಸಂಧಾನದ ಬಳಿಕ ಕೊನೆಗೂ ಕಬ್ಬಿನ ದರ ಅಂತಿಮಗೊಂಡಿದೆ. ನ್ಯಾಯಯುತ ಬೆಲೆಗಾಗಿ ಹೋರಾಟ ನಡೆಸುತ್ತಿದ್ದ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಈ ಒಪ್ಪಂದ ಹೊಸ ನಿರೀಕ್ಷೆ ಮೂಡಿಸಿದೆ.