ಮುಂಬಯಿ, ನ. 24: ನೌಕಾಪಡೆಯ ಗೂಢಚಾರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ 21 ವರ್ಷದ ನೌಕಾ ಡಾಕ್ಯಾರ್ಡ್ ತರಬೇತಿದಾರನೊಬ್ಬ ಹಡಗು ನಿರ್ಮಾಣ ಮತ್ತು ದುರಸ್ತಿ ಕೇಂದ್ರದ ಸೂಕ್ಷ್ಮ ಸೌಲಭ್ಯಗಳಿಗೆ ಸಂಬಂಧಿಸಿದ ಸುಮಾರು 90 ವಿಡಿಯೊಗಳನ್ನು ಚಿತ್ರೀಕರಿಸಿದ್ದು, ಪಾಕಿಸ್ತಾನದ ಗುಪ್ತಚರ ಏಜೆಂಟರೆಂದು ಶಂಕಿಸಲಾದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶದಲ್ಲಿಯೇ ಇರಿಸಿಕೊಳ್ಳಲು ಸೋಮವಾರ ಕೋರ್ಟ ಅನುಮತಿ ಕೋರಿದ ಪೊಲೀಸರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಮುಂಬಯಿಯ ಕೊಲಾಬಾ ಪ್ರದೇಶದ ಬಧ್ವಾರ್ ಪಾರ್ಕ್ ನಿವಾಸಿ ಬಂಟಿ ರಾಮಪ್ರಕಾಶ ಮೀನಾ ಎಂಬಾತನನ್ನು ಕಳೆದ ವಾರ ಭಾರತೀಯ ನ್ಯಾಯ ಸಂಹಿತೆ, ಅಧಿಕೃತ ರಹಸ್ಯಗಳ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಂಧಿಸಲಾಗಿತ್ತು.
ಪೊಲೀಸರು ಕೋರ್ಟಗೆ ಸಲ್ಲಿಸಿರುವ ಅರ್ಜಿಯ ಪ್ರಕಾರ, ಪಾಕಿಸ್ತಾನದ ಗುಪ್ತಚರ ಏಜೆಂಟರು ನಿರ್ವಹಿಸುತ್ತಿದ್ದಾರೆಂದು ಶಂಕಿಸಲಾದ ಇನ್ಸ್ಟಾಗ್ರಾಮ್ ಖಾತೆ ಹಾಗೂ ವಾಟ್ಸ್ಆ್ಯಪ್ ಸಂಖ್ಯೆ ಮೂಲಕ ಮೀನಾ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ನೌಕಾ ಡಾಕ್ಯಾರ್ಡ್ನೊಳಗಿನ ಸೂಕ್ಷ್ಮ ಸೌಲಭ್ಯಗಳ ಸುಮಾರು 90 ವಿಡಿಯೊಗಳನ್ನು ಚಿತ್ರೀಕರಿಸಿದ್ದ ಆರೋಪಿ, ಶಂಕಿತ ಪಾಕಿಸ್ತಾನಿ ಗುಪ್ತಚರ ಏಜೆಂಟರೊಂದಿಗೆ ಸಾಮೂಹಿಕ ಕರೆಗಳಲ್ಲಿಯೂ ಭಾಗವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವರು ಹಡಗು ನಿರ್ವಹಣಾ ಕಂಪನಿಗಳ ಉದ್ಯೋಗಿಗಳ ಸೋಗಿನಲ್ಲಿ ಮುಂಬಯಿಯ ನೌಕಾ ಡಾಕ್ಯಾರ್ಡ್ಗೆ ಆಗಮಿಸುವ ನೌಕೆಗಳ ಕುರಿತು ಮಾಹಿತಿ ಸಂಗ್ರಹಿಸಲು ಯತ್ನಿಸಿರುವ ಶಂಕೆಯೂ ವ್ಯಕ್ತವಾಗಿದೆ.
ಆರೋಪಿ ಯಾರೊಂದಿಗೆ ಸಂಪರ್ಕ ಹೊಂದಿದ್ದ, ಯಾವ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದ, ಹಣಕಾಸು ವಹಿವಾಟು ನಡೆದಿದೆಯೇ ಹಾಗೂ ಗೂಢಚಾರಿಕೆ ಜಾಲದಲ್ಲಿ ಇನ್ನಿತರ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಜಾಲದ ವ್ಯಾಪ್ತಿ ಹಾಗೂ ಇದರಲ್ಲಿ ಶಾಮೀಲಾಗಿರುವ ಇತರ ವ್ಯಕ್ತಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಲಾಗಿದೆ ಎಂದು ಮುಂಬಯಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.